ಬೆಂಗಳೂರು: ಡಿ.ಕೆ ಶಿವಕುಮಾರ್ ನಿವಾಸದ ಮೇಲಿನ ದಾಳಿ ಹಾಗೂ ತಪಾಸಣೆ ರಾಜಕೀಯ ಪ್ರೇರಿತವಾಗಿದ್ದು, ಚುನಾವಣೆ ಸಂದರ್ಭದಲ್ಲಿ ಮಾಡಿರುವುದು ರಾಜಕೀಯ ದುರುದ್ದೇಶದಿಂದಲೇ ಎಂದು ಕಾಂಗ್ರೆಸ್ನ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಇಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು. ಭೇಟಿಯ ನಂತರ ಮಾತನಾಡಿದ ಸಿದ್ದರಾಮಯ್ಯ, ಅ.14 ರಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ನೀವು ಮತ್ತು ಡಿಕೆ ಶಿವಕುಮಾರ್ ಅವರು ಇರಲೇಬೇಕು ಎಂದು ಕುಸುಮ ಹನುಮಂತರಾಯಪ್ಪ ಮನವಿ ಮಾಡಿದ್ದಾರೆ, ಬರುವುದಾಗಿ ಭರವಸೆ ನೀಡಿದ್ದೇನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ ಅವರ ಆಪ್ತ ಸಹಾಯಕರ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಮಾತನಾಡಿ, ಅವರ ಆಪ್ತ ಸಹಾಯಕನಿಗೆ ಹೊಡೆದಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅದನ್ನು ಅವರ ಬಳಿಯೇ ಕೇಳಬೇಕು. ಒಂದೊಮ್ಮೆ ಹೊಡೆದಿದ್ದರೆ ಅದು ತಪ್ಪು. ತಪಾಸಣೆಗೆ ಅಧಿಕಾರ ಇದೆ ಮಾಡಲಿ, ದೈಹಿಕ ಹಲ್ಲೆ ನಡೆಸುವುದು ಸರಿಯಲ್ಲ ಎಂದರು.
ಶಿವಕುಮಾರ್ ನಿವಾಸದ ಮೇಲಿನ ದಾಳಿ ಹಾಗೂ ತಪಾಸಣೆ ರಾಜಕೀಯ ಪ್ರೇರಿತವಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾಡಿರುವುದು ರಾಜಕೀಯ ದುರುದ್ದೇಶದಿಂದಲೇ ಎಂದರು.
ರಾಜ್ಯದಲ್ಲಿ ಕೊರೊನಾ ನಿತ್ಯ 9ರಿಂದ 10 ಸಾವಿರ ಮಂದಿಗೆ ಬರುತ್ತಿದೆ. ತಪಾಸಣೆ ಪ್ರಮಾಣವನ್ನು ಹೆಚ್ಚಿಸಿದರೆ ರೋಗಿಗಳ ಸಂಖ್ಯೆ ಕೂಡ ಇನ್ನಷ್ಟು ಹೆಚ್ಚುತ್ತದೆ. ಈ ಸಂದರ್ಭ ಶಾಲೆ ಆರಂಭಿಸಿದರೆ ಸಮಸ್ಯೆ ಎದುರಾಗಲಿದೆ. ಬುದ್ಧಿ ಇರುವವರೇ ಸಮರ್ಪಕವಾಗಿ ಮಾಸ್ಕ್ ಹಾಕುವುದಿಲ್ಲ. ನಿರ್ಲಕ್ಷ್ಯ ಹೆಚ್ಚಿದೆ. ಹೀಗಿರುವಾಗ ಮಕ್ಕಳು ಮಾಸ್ಕ್ ಧರಿಸಿ ಸಹಪಾಠಿಗಳ ಜೊತೆ ಕಳೆಯಲು ಸಾಧ್ಯವೇ? ಇದರಿಂದಾಗಿ ಸದ್ಯ ಶಾಲೆ ಆರಂಭಿಸುವುದು ಸೂಕ್ತವಲ್ಲ ಎಂದು ನನ್ನ ಅಭಿಪ್ರಾಯ ಎಂದರು.