ಬೆಂಗಳೂರು: ಮಹಿಳಾ ಸಾಂತ್ವನ ಕೇಂದ್ರದಿಂದ ರಾತ್ರೋರಾತ್ರಿ ಗೋಡೆ ಹಾರಿ ಐವರು ವಿದೇಶಿ ಮಹಿಳೆಯರು ನಾಪತ್ತೆ ಪ್ರಕರಣ ಸಂಬಂಧ, ತನಿಖೆ ಚುರುಕುಗೊಳಿಸಿರುವ ಸಿದ್ಧಾಪುರ ಪೊಲೀಸರು, ಆಫ್ರಿಕಾ ಪ್ರಜೆಗಳ ಮನೆಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ವಿದೇಶಿಯರು ಹೆಚ್ಚಾಗಿ ವಾಸವಾಗಿರುವ ನಗರ ಪೂರ್ವ ಹಾಗೂ ಈಶಾನ್ಯ ವಿಭಾಗಗಳಾದ ಕೊತ್ತನೂರು, ಹೆಣ್ಣೂರು, ಬಾಣಸವಾಡಿ, ಕಮ್ಮನಹಳ್ಳಿ, ಟಿಸಿ ಪಾಳ್ಯ, ಕೆ.ಆರ್.ಪುರ, ಬಾಗಲೂರು ಸೇರಿ 18 ಕಡೆಗಳಲ್ಲಿ ವಿದೇಶಿಯರ ಮನೆಗಳ ಮೇಲೆ ದಾಳಿ ನಡೆಸಿದ ಸಿದ್ದಾಪುರ ಪೊಲೀಸರು, ಪರಾರಿಯಾಗಿರುವ ಆರೋಪಿತರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಪೊಲೀಸರು, ಆರೋಪಿತರ ಮೊಬೈಲ್ ನಂಬರ್ ಸಂಗ್ರಹಿಸಿ ಪರಿಶೀಲಿಸಿದಾಗ ಎರಡು ದಿನಗಳ ಹಿಂದೆ ಹೈದರಾಬಾದ್ನಲ್ಲಿ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ಎಸ್ಕೇಪ್ ಆಗಿರುವ ಆರೋಪಿಗಳು ತಮ್ಮ ಸ್ನೇಹಿತರೊಂದಿಗೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ವೀಸಾ, ಪಾರ್ಸ್ ಪೋರ್ಟ್ ಅವಧಿ ಮೀರಿದರೂ ವಿದೇಶಿಯರು ನಗರದಲ್ಲಿ ಅಕ್ರಮವಾಗಿ ನೆಲೆಯೂರಿದ್ದರು. ಈ ಸಂಬಂಧ ಹೆಣ್ಣೂರು ಸೇರಿದಂತೆ ಪೂರ್ವ ವಿಭಾಗದ ಪೊಲೀಸರು 13 ಮಂದಿ ವಿದೇಶಿಯರನ್ನು ಬಂಧಿಸಿದ್ದರು. ಬಳಿಕ ಸಿದ್ದಾಪುರ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಬಂಧಿತರನ್ನು ಇರಿಸಲಾಗಿತ್ತು. ಮೂವರು ಕಾಂಗೋ ಇಬ್ಬರು ನೈಜೀರಿಯಾ ದೇಶದ ಮಹಿಳೆಯರು ಮಧ್ಯರಾತ್ರಿ ಸಿಬ್ಬಂದಿ ಕಣ್ತಪ್ಪಿಸಿ, ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದರು.
ಇದನ್ನೂ ಓದಿ : ಬಂದೂಕು ಸ್ವಚ್ಛಗೊಳಿಸುತ್ತಿರುವಾಗ ಮಿಸ್ ಫೈರಿಂಗ್: ಕಾನ್ಸ್‌ಟೇಬಲ್ ಸಾವು
ವಿದೇಶಿಯರನ್ನು ನೋಡಿಕೊಳ್ಳುವುದಕ್ಕಾಗಿಯೇ ಮೂರು ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸ್ ಭದ್ರತೆ ನಡುವೆಯೂ ಪರಾರಿಯಾಗಿದ್ದರು. ತಪ್ಪಿಸಿಕೊಳ್ಳುವ ಭರದಲ್ಲಿ ಗೋಡೆ ಹತ್ತುವಾಗ ಆಯತಪ್ಪಿ ಮಹಿಳೆ ಓರ್ವಳು ಬಿದ್ದು, ಕಾಲು ಮುರಿದುಕೊಂಡಿದ್ದಳು.