ಬೆಂಗಳೂರು: ಮೂರನೇ ಹಂತದ ಲಾಕ್ಡೌನ್ನಿಂದಾಗಿ ಒಪ್ಪೊತ್ತಿನ ಊಟಕ್ಕಾಗಿ ಪರದಾಟ ನಡೆಸುತ್ತಿದ್ದ ವೃದ್ಧೆಗೆ ದಿನಸಿ ನೀಡುವ ಮೂಲಕ ಗಿರಿನಗರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದ ವೃದ್ಧೆ ಪದ್ಮಾ ಎಂಬುವರಿಗೆ ಪೊಲೀಸರು ಸಹಾಯ ಹಸ್ತ ಚಾಚಿದ್ದಾರೆ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗನಿಗೂ ತಿಂಗಳ ವೇತನ ಸಿಗದೆ ಕುಟುಂಬ ಪರದಾಡುತ್ತಿತ್ತು. ಇದರ ಪರಿಣಾಮ ಹಣವಿಲ್ಲದೆ ದಿನಸಿ ಖರೀದಿಸಲು ಸಾಧ್ಯವಾಗಿರಲಿಲ್ಲ. ಮನೆಯಲ್ಲಿ ಇದ್ದ ರೇಷನ್ ಮುಗಿಯುತ್ತಿದ್ದಂತೆ ಏನೂ ಮಾಡಲು ದಿಕ್ಕು ತೋಚದಿದ್ದಾಗ ಪದ್ಮಾ ಅವರು ಕಮೀಷನರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಅವರನ್ನು ಭೇಟಿಯಾಗಿ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.
ಇನ್ನು ಸಮಸ್ಯೆ ಆಲಿಸಿದ ಡಿಸಿಪಿ ಸೂಚನೆ ಮೇರೆಗೆ ಅಲ್ಲಿಂದ ವೃದ್ಧೆ ಗಿರಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿದ್ದಲಿಂಗಯ್ಯ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ವೃದ್ಧೆಗೆ ಅಕ್ಕಿ, ಗೋಧಿ, ಬೇಳೆ, ಸಕ್ಕರೆ ಸೇರಿದಂತೆ ರೇಷನ್ ಕಿಟ್ ವಿತರಿಸಿದ್ದಾರೆ. ಇದರಿಂದ ಸಂತೃಪ್ತಿಗೊಂಡ ವೃದ್ಧೆ ತುಂಬು ಮನದಿಂದ ಪೊಲೀಸರಿಗೆ ಆಶೀರ್ವಾದ ಮಾಡಿದ್ದಾರೆ.