ಬೆಂಗಳೂರು: ಬಿಜೆಪಿ ಬಂದಾಗಲೆಲ್ಲ ಈ ಸಮಸ್ಯೆ ಉದ್ಭವಿಸುತ್ತಿದೆ, ನಮ್ಮಲ್ಲಿಯೂ ಈ ಹಿಂದೆ ಇಂತಹ ಪರಿಸ್ಥಿತಿ ಇತ್ತು. ಅದರಿಂದ ಪಾಠ ಕಲಿತು ನಾವು ತಪ್ಪು ತಿದ್ದುಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಜಯನಗರದಲ್ಲಿ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ನಂತರ ಬಿಜೆಪಿ ಆಂತರಿಕ ಕಚ್ಚಾಟದ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಪಕ್ಷದ ಗೊಂದಲ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತದೆ. ಜನರಿಗೆ ಇದು ಮಾರಕ. ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಬಲಿಷ್ಠ ನಾಯಕ ಅಂದುಕೊಂಡಿದ್ದೆ. ಆದರೆ ಆಡಳಿತ ವಿಚಾರದಲ್ಲಿ ಅವರು ಬಹಳ ದುರ್ಬಲರಾಗಿದ್ದಾರೆ. ಬಿಜೆಪಿಗೆ ಯಾಕಾದರೂ ಅಧಿಕಾರ ಕೊಟ್ಟೆವು ಎಂದು ಜನರಿಗೆ ವೈರಾಗ್ಯ ಬಂದಿದೆ ಎಂದರು.
ಸರ್ಕಾರದ ದೌರ್ಬಲ್ಯ ಕುರಿತು ಸತ್ಯಾಂಶ ಒಪ್ಪಿಕೊಂಡ ಈಶ್ವರಪ್ಪ ಅವರಿಗೆ ಅಭಿನಂದನೆಗಳು. ಈ ಪರಿಸ್ಥಿತಿಯನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡುವುದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ. ಕಾಂಗ್ರೆಸ್ ಇದನ್ನು ಉಪಯೋಗಿಸಿಕೊಳ್ಳುತ್ತದೋ ಇಲ್ಲವೋ ಅದು ಬೇರೆ ವಿಚಾರ. ಮೊದಲು ಅವರ ಆಟ ಮುಗಿಯಲಿ ಎಂದರು.
ಬಾಂಬೆ ಟೀಮ್ನಿಂದ ಗೊಂದಲವಾಗುತ್ತಿದೆ ಎಂಬ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ನಾನು ಈ ಹಿಂದೆಯೇ ವಿಧಾನಸಭೆಯಲ್ಲೇ ಭವಿಷ್ಯ ನುಡಿದಿದ್ದೆ. ಈಶ್ವರಪ್ಪ ಅವರ ಈ ಟೀಕೆಗೆ ಬಿ.ಸಿ. ಪಾಟೀಲ್ ಈಗ ಉತ್ತರ ಕೊಟ್ಟಿದ್ದಾರೆ' ಎಂದು ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದ ಬಗ್ಗೆ ಮಾತನಾಡಿದರು.
ಜಯನಗರ, ಬಿಟಿಎಂ ಲೇಔಟ್ನಲ್ಲಿ ಆಹಾರದ ಕಿಟ್ ವಿತರಣೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಜಯನಗರ ಹಾಗೂ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಹಾರದ ಕಿಟ್ ವಿತರಿಸಿದರು.
ಜಯನಗರದಲ್ಲಿ ಶಾಸಕಿ ಸೌಮ್ಯಾರೆಡ್ಡಿ ಆಯೋಜಿಸಿದ್ದ ಬಡವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಂದಿ ಬಿಬಿಎಂಪಿ ಪೌರ ಕಾರ್ಮಿಕರು, 50ಕ್ಕೂ ಹೆಚ್ಚು ಮಂದಿ ಆಶಾ ಕಾರ್ಯಕರ್ತೆಯರು, ನೂರಾರು ಬಡಜನರಿಗೆ ಆಹಾರದ ಕಿಟ್ ಅನ್ನು ಉಭಯ ನಾಯಕರು ವಿತರಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೋವಿಡ್ ಮೃತರಿಗೆ ಒಂದು ಲಕ್ಷ ರೂ. ನೀಡುವ ವಿಚಾರ ಪ್ರಸ್ತಾಪಿಸಿ, ನಾನು ಐದು ಲಕ್ಷ ನೀಡಿ ಎಂದು ಹೇಳಿದ್ದೆ. ಕೋವಿಡ್ ಬಂದ್ರೆ ಐದಾರು ಲಕ್ಷ ಖರ್ಚು ಆಗಿರುತ್ತದೆ. ಮನೆಯಲ್ಲಿ ಒಬ್ಬರಿಗೆ ಕೋವಿಡ್ ಬಂದು ಸಾವನ್ನಪ್ಪಿದರೇ ಅವರ ಕುಟುಂಬಗಷ್ಟೇ ಒಂದು ಲಕ್ಷ ರೂ. ನೀಡ್ತಾರೆ. ಆಸ್ಪತ್ರೆಯಲ್ಲಿ ಒಂದೇ ಕುಟುಂಬದವರು ಎಂದು ಕಡಿಮೆ ಬಿಲ್ ತೆಗೆದುಕೊಳ್ಳುತ್ತಾರಾ? ಕೋವಿಡ್ ಗೆ ಬಲಿಯಾದ ಪ್ರತಿಯೊಬ್ಬರಿಗೆ ಹಣ ನೀಡಿ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಹಣ ಎನ್ನುವುದು ಸರಿಯಲ್ಲ. ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿರಲು ನಾಲಾಯಕ್ ಎಂದು ಟೀಕಿಸಿದರು.