ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ಕೋವಿಡ್-19 ಲಕ್ಷಣಗಳಿಲ್ಲದ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸುವುದು ಕಷ್ಟಕರವಾಗುತ್ತಿದೆ. ಹೀಗಾಗಿ ಸರ್ಕಾರದ ಸಲಹೆಯಂತೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳನ್ನು ನಿರ್ವಹಿಸಲು ಕೋವಿಡ್ ಆರೈಕೆ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್ ಆರೈಕೆ ಕೇಂದ್ರದ ಸ್ಥಾಪನೆಗಾಗಿ ಕೆಎಸ್ಆರ್ಟಿಸಿಯ ಶ್ರೀ ಬಸವೇಶ್ವರ ಬಸ್ ನಿಲ್ದಾಣ, ಪೀಣ್ಯ ಬೆಂಗಳೂರಿನಲ್ಲಿ ಸ್ಥಳಾವಕಾಶ ಮಾಡಲಾಗಿದೆ.
ರೋಟರಿ ಅಡ್ವಿಕಾ ಕೇರ್ ಫೌಂಡೇಶನ್ ಮತ್ತು ನಯೋನಿಕಾ ಐ ಟ್ರಸ್ಟ್ ಸಹಯೋಗದೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ನಾಳೆಯಿಂದ ಈ ಕೇಂದ್ರ ಕಾರ್ಯಾರಂಭ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಾರಿಗೆ ಸಚಿವ ಲಕ್ಷಣ ಸವದಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿದರು.
ಇದೇ ವೇಳೆ ಕೋವಿಡ್ -19 ಗೆ ತುತ್ತಾಗಿ ಗುಣಮುಖರಾದ ಕೆಎಸ್ಆರ್ಟಿಸಿ ಚಾಲಕ/ನಿರ್ವಾಹಕ/ಸಿಬ್ಬಂದಿಗೆ ಉಪಮುಖ್ಯಮಂತ್ರಿಗಳು ಹೂ ನೀಡಿ ಸ್ವಾಗತಿಸಿದರು. ಉದ್ಘಾಟನೆ ಬಳಿಕ ಮಾತಾನಾಡಿದ ಸಚಿವರು, ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸುಮಾರು ಒಂದು ಸಾವಿರ ಸಿಬ್ಬಂದಿ ಕೊವಿಡ್ -19 ಗೆ ತುತ್ತಾಗಿದ್ದು 700 ಸಿಬ್ಬಂದಿ ಗುಣಮುಖರಾಗಿದ್ದಾರೆ. ಅವರ ಯೋಗಕ್ಷೇಮ ನಮ್ಮ ಪ್ರಥಮ ಆದ್ಯತೆಯಾಗಿದ್ದು ಈ ಕೋವಿಡ್ ಕೇರ್ ಸೆಂಟರ್ನಲ್ಲಿ ನಮ್ಮ ಸಿಬ್ಬಂಂದಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಮುಂಜಾಗ್ರತೆ ವಹಿಸಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಕೋವಿಡ್ ಕೇರ್ ಕೇಂದ್ರ :
ಪೀಣ್ಯ ಬಸ್ ನಿಲ್ದಾಣದ ನೆಲಮಹಡಿ ಹಾಗೂ ಮೊದಲನೆ ಮಹಡಿಯಲ್ಲಿ, ಈ ಕೇಂದ್ರವು ಮೊದಲನೆ ಹಂತದಲ್ಲಿ 200 ಹಾಸಿಗೆಗಳನ್ನು ಹೊಂದಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮತ್ತು ಬೇಡಿಕೆ ಹೆಚ್ಚಾದರೆ ಇನ್ನೂ 100 ಹಾಸಿಗೆಗಳನ್ನು ಸೇರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರದಲ್ಲಿ ಪೂರ್ಣ ಸಮಯದ ದಾದಿಯರು, ವೈದ್ಯರು, ರೋಗಿಗಳ ಆರೈಕೆ ಮಾಡುವವರು, ಸ್ವಚ್ಛತಾಕಾರರು, ವ್ಯವಸ್ಥಾಪಕರು, ಬಿಲ್ಲಿಂಗ್ ತಂಡ, ಸ್ವಾಗತಕಾರರು, ನಿರ್ವಹಣೆ ಮತ್ತು ಭದ್ರತಾ ತಂಡಗಳು ಇರಲಿವೆ.
ರೋಗಿಗೆ ಆಸ್ಪತ್ರೆಯ ಆರೈಕೆ ಅಗತ್ಯವಿದ್ದಲ್ಲಿ, ಪ್ರಕ್ರಿಯಾ ಆಸ್ಪತ್ರೆ ತನ್ನ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸುತ್ತದೆ. ಕೇಂದ್ರದಲ್ಲಿ ಆಂಬ್ಯುಲೆನ್ಸ್ ಜೊತೆ ಆಕ್ಸಿಜನ್ ಸೌಲಭ್ಯ ಲಭ್ಯವಿರುತ್ತದೆ. ಸ್ವಾಬ್ ಸಂಗ್ರಹ ಕೇಂದ್ರವನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಮತ್ತು ವಾಯವ್ಯ ಸಾರಿಗೆ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಶೇ 50 ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಈ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ರೋಟರಿ ಮತ್ತು ಟೈಟಾನ್‍ನಿಂದ ಉಲ್ಲೇಖಿಸಲಾದ ರೋಗಿಗಳಿಗೆ ಶೇ 10 ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರ ಸೂಚಿಸಿದ ದರಗಳ ಪ್ರಕಾರ ರೋಗಿಗಳಿಗೆ ಶುಲ್ಕ ವಿಧಿಸಲಾಗುತ್ತದೆ.
ಬಡವರು ಮತ್ತು ನಿರ್ಗತಿಕರಿಗೆ ಈ ಕೇಂದ್ರದಿಂದ ಅನುಕೂಲವಾಗಲಿದೆ. ಕೇಂದ್ರದಲ್ಲಿ ಶೌಚಾಲಯ, ಬಿಸಿನೀರಿನ ಸ್ನಾನದ ಸೌಲಭ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಎಲ್ಲ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲಾಗುವುದು. ಕೇಂದ್ರದಲ್ಲಿ ಸಿಬ್ಬಂದಿ ಇರಲು ಅವಕಾಶ ಕಲ್ಪಿಸಲಾಗಿದೆ. ಸಿಬ್ಬಂದಿ ಮತ್ತು ವೈದ್ಯರುಗಳಿಗೆ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಈ ಕೇಂದ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಂಪೂರ್ಣ ಪಿಪಿಇ ಕಿಟ್‍ಗಳನ್ನು ಒದಗಿಸಲಾಗಿದೆ. ಕೇಂದ್ರವು ತುರ್ತು ವಾರ್ಡ್ ಮತ್ತು 10 ಹಾಸಿಗೆಗಳ ಐಸಿಯು ಹೊಂದಿದ್ದು, ಇದರಲ್ಲಿ ರೋಗಿಗಳ ಹಾಸಿಗೆಗಳು, ಮಾನಿಟರ್ಗಳು, ಆಮ್ಲಜನಕ ಪೂರೈಕೆ ಮತ್ತು ಆಮ್ಲಜನಿಕ ಸಾಂದ್ರತೆಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರಿಗೆ ಸಂಜೀವಿನಿ ಆಂಬ್ಯುಲೆನ್ಸ್
ಕೆಎಸ್ಆರ್ಟಿಸಿ, ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರಿನಲ್ಲಿ ಆಂತರಿಕವಾಗಿ ಲಭ್ಯವಿರುವ ವಸ್ತುಗಳಲ್ಲಿ ಮಿನಿ ಬಸ್ಸನ್ನು ಆಂಬ್ಯುಲೆನ್ಸ್ ಆಗಿ ನಿರ್ಮಿಸಲಾಗಿದ್ದು, ವೆಚ್ಚ ಸುಮಾರು 2.5 ಲಕ್ಷಗಳಾಗಿದೆ. ತುರ್ತು ಸ್ಥಳದಿಂದ ಅಂಬ್ಯುಲೆನ್ಸ್ಗೆ ರೋಗಿಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ವರ್ಗಾಯಿಸಲು ಮತ್ತು ಆಸ್ಪತ್ರೆಯನ್ನು ತಲುಪಿದ ನಂತರ ರೋಗಿಯನ್ನು ತ್ವರಿತವಾಗಿ ಮತ್ತು ಆರಾಮದಾಯಕವಾಗಿ ವರ್ಗಾಯಿಸಲು ಅನುಕೂಲವಾಗುವಂತೆ 2 ಸ್ಟ್ರೆಚರ್ಗಳನ್ನು ಹೊಂದಿದ ಆಂಬ್ಯುಲೆನ್ಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ.