ಬೆಂಗಳೂರು: ಹಳೆ ದ್ವೇಷ ಹಿನ್ನೆಲೆಯಲ್ಲಿ ಹಾಡಹಾಗಲೇ ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಕ್ಕಸಂದ್ರ ನಿವಾಸಿ ಮದನ್ ಕೊಲೆಯಾದ ವ್ಯಕ್ತಿ.
ಬನಶಂಕರಿ ದೇವಾಲಯದ ಮೆಟ್ರೋ ಪಿಲ್ಲರ್ ಬಳಿ ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಸೊಪ್ಪು ಖರೀದಿಸಿ ಬೈಕ್‌ನಲ್ಲಿ ತೆರಳುವಾಗ, ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ 6 ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮದನ್‌ಗೆ ಹಲ್ಲೆ ಮಾಡಿದ್ದರು. ಆ ಬಳಿಕ ಕ್ಷಣಾರ್ಧದಲ್ಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ, ಜಯನಗರ ಹಾಗೂ ಬನಶಂಕರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಕೃತ್ಯ ನಡೆದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಹಳೆ ದ್ವೇಷ ಹಿನ್ನೆಲೆಯಲ್ಲಿ ಕೊಲೆ ಶಂಕೆ:
ಮದನ್ ಲಕ್ಕಸಂದ್ರ ನಿವಾಸಿಯಾಗಿದ್ದು, ವಿಲ್ಸನ್ ಗಾರ್ಡನ್‌ನಲ್ಲಿ ಕೆಲಸ ಮಾಡುತ್ತಿದ್ದ. 2018ರಲ್ಲಿ ಲಕ್ಕಸಂದ್ರ ವಿಜಿ ಎಂಬಾತನ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ಈತನಿಗೆ ಸಂಪರ್ಕವಿತ್ತು ಎಂಬ ಮಾಹಿತಿ ಇದೆ. ಕೆಲವು ತಿಂಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ರೌಡಿ ಲಿಂಗನ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ಮದನ್ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದೆ. ಸದ್ಯ ಈ ಎರಡೂ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಸದ್ದು.. ಕಾರಣ ಮಾತ್ರ ನಿಗೂಢ..
ಡಿಸಿಪಿ ಹರೀಶ್ ಪಾಂಡೆ ಪ್ರತಿಕ್ರಿಯೆ
ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಮಧ್ಯಾಹ್ನ ಕೊಲೆ ನಡೆದಿದೆ. ಮದನ್ ಗುರಿಯಾಗಿಸಿಕೊಂಡು ಹಂತಕರು ಮೂರು ಬೈಕ್ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದು ಪರಾರಿಯಾಗಿದ್ದಾರೆ. ಹಳೆ ದ್ವೇಷ ಮೇರೆಗೆ ಕೊಲೆ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಆರೋಪಿಗಳ ಸುಳಿವು ದೊರೆತಿದ್ದು ಶೀಘ್ರದಲ್ಲಿ ಬಂಧಿಸುವುದಾಗಿ ತಿಳಿಸಿದರು.