ಬೆಂಗಳೂರು: ಸುಮಾರು 40 ದಿನ ಮದ್ಯ ಸಿಗದೆ ಕಂಗಾಲಾಗಿದ್ದ ರಾಜ್ಯದ ಜನ ಮೇ. 4 ರಿಂದ ಮರಳಿ ಮದ್ಯ ಸಿಕ್ಕಾಗ ತೋರಿಸಿದ ಆಸಕ್ತಿಯನ್ನು ಕ್ರಮೇಣ ಕಡಿಮೆ ಮಾಡಿಕೊಂಡಿದ್ದಾರೆ. ಇಂದು ಮದ್ಯದಂಗಡಿ ಎದುರು ಹಿಂದಿನ ಉತ್ಸಾಹ ಹಾಗೂ ಉದ್ದನೇ ಸರದಿ ಸಾಲುಗಳು ಕಂಡುಬರುತ್ತಿಲ್ಲ.
ಮೊದಲ ಒಂದು ವಾರ ಕಂಡ ಜನರ ಉತ್ಸಾಹ ಈಗ ಕಡಿಮೆಯಾಗಿದ್ದು, ಮದ್ಯದಂಗಡಿ ಮುಂದೆ ಕೇವಲ ಸರದಿ ಸಾಲಿಗಾಗಿ ಸಿದ್ಧಪಡಿಸಿದ್ದ ಅಟ್ಟಣಿಗೆಗಳು ಖಾಲಿ ಖಾಲಿಯಾಗಿ ಗೋಚರಿಸುತ್ತಿವೆ. ಹೆಚ್ಚಿನ ಜನರಾಗಲಿ, ಆತುರವಾಗಲಿ, ಅತಿಯಾಸೆಯಾಗಲಿ ಮದ್ಯದಂಗಡಿ ಮುಂದೆ ಹಿಂದಿನಷ್ಟು ಇಲ್ಲ.
ಕೊರೊನಾದಿಂದಾಗಿ ಮದ್ಯವನ್ನು ಮನೆಗೆ ಕೊಂಡೊಯ್ದು ಕುಡಿಯಬೇಕಾಗಿದೆ. ಹೆಚ್ಚಿನವರಿಗೆ ಮನೆಯಲ್ಲಿ ಕುಡಿಯುವ ಅಭ್ಯಾಸ ಇರಲ್ಲ, ಕುಟುಂಬ ಸದಸ್ಯರು ಇರುವಾಗ ಮುಜುಗರ, ಅಲ್ಲದೇ ಮನೆಯವರ ವಿರೋಧ ಎದುರಾಗುವುದರಿಂದ ಜನ ಮನೆಗೆ ಕೊಂಡೊಯ್ಯಲು ಬಯಸುವುದಿಲ್ಲ. ಬಾರ್ ಸರ್ವಿಸ್ ಆರಂಭವಾದ ಮೇಲೆ ಮತ್ತೆ ಉತ್ತಮ ಆದಾಯ ನಿರೀಕ್ಷಿಸಬಹುದು ಎನ್ನುತ್ತಾರೆ ಹನುಮಂತನಗರದ ಸಪ್ತಗಿರಿ ವೈನ್ಸ್ ಕ್ಯಾಶಿಯರ್ ಕಿರಣ್.
ಕೊರೊನಾ ವೈರಸ್ ಹತೋಟಿಗೆ ತರುವ ನಿಟ್ಟಿನಲ್ಲಿ ಲಾಕ್ಡೌನ್ ಘೋಷಣೆಯಾದ ಬಳಿಕ ಮುಚ್ಚಿದ್ದ ಬಾರ್ಗಳು 40 ದಿನಗಳ ಬಳಿಕ ಮತ್ತೆ ಬಾಗಿಲು ತೆರೆದಿವೆ. ಮೇ. 4 ರಿಂದ ರಾಜ್ಯಾದ್ಯಂತ ಸುಮಾರು 4,700 ಅಂಗಡಿಗಳಲ್ಲಿ ಮದ್ಯ ಮಾರಾಟ ಆರಂಭವಾಯಿತು. ಆದರೆ, ಬಾರ್ ಮತ್ತು ರೆಸ್ಟೊರೆಂಟ್ಗಳಿಗೆ ಮೇ. 9 ರಿಂದ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿತ್ತು. ಮೇ. 4 ರಂದು 3,946 ಚಿಲ್ಲರೆ ಮದ್ಯದ ಅಂಗಡಿಗಳು, ಅಂದರೆ ವೈನ್ ಶಾಪ್ ಮತ್ತು ಎಂಆರ್ಪಿ ಮಳಿಗೆಗಳು, 789 ಎಂಎಸ್ ಐಎಲ್ ಮಳಿಗೆಗಳು ತೆರೆದಿದ್ದವು. ಮಾರಾಟದ ಸಮಯವನ್ನು ಬೆಳಗ್ಗೆ 9ರಿಂದ ಸಂಜೆ 7ಕ್ಕೆ ನಿಗದಿಪಡಿಸಲಾಗಿತ್ತು. ಗ್ರಾಹಕರು ಗುಂಪು ಗುಂಪಾಗಿ ಪ್ರವೇಶಿಸುವಂತಿಲ್ಲ, ಒಂದು ಬಾರಿಗೆ ಐವರು ಗ್ರಾಹಕರಿಗೆ ಮಾತ್ರ ಅವಕಾಶ, ಸರದಿಯಲ್ಲಿ ನಿಲ್ಲುವವರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮದ್ಯದ ಅಂಗಡಿ ನೌಕರರು, ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯ, ಮಾರಾಟ ಸ್ಥಳದಲ್ಲಿ ಸ್ಯಾನಿಟೈಸರ್ ಇಟ್ಟಿರಬೇಕು ಎಂಬ ನಿಯಮ ಕೂಡ ತರಲಾಯಿತು.
ಮೂರು ದಿನ ಬಂಪರ್ ಲಾಭ:
ಕೆಎಸ್ಬಿಸಿಎಲ್ (ಕರ್ನಾಟಕ ಪಾನೀಯ ನಿಗಮ) ಬರೋಬ್ಬರಿ ಆರಂಭದ ಮೊದಲ ಮೂರು ದಿನ ಭರ್ಜರಿ ವ್ಯಾಪಾರ ಮಾಡಿತ್ತು. ಮೊದಲ ದಿನ 45 ಕೋಟಿ ರೂ. ಎರಡನೇ ದಿನ 197 ಕೋಟಿ ರೂ. ಹಾಗೂ ಮೂರನೇ ದಿನ 230 ಕೋಟಿ ರೂ. ವ್ಯಾಪಾರ ನಡೆಸಿತು. ನಂತರ ಖರೀದಿಸುವವರ ಉತ್ಸಾಹ ಕಡಿಮೆಯಾಗುತ್ತಾ ಸಾಗಿದೆ. ಮೇ. 4 ಮತ್ತು 5 ವಾರಾಂತ್ಯವಾಗಿತ್ತು. ಮೇ. 6 ಸೋಮವಾರವಾದರೂ ವ್ಯಾಪಾರ ಜೋರಾಗಿತ್ತು. ಆದರೆ ಮಂಗಳವಾರದ ನಂತರ ವ್ಯಾಪಾರ ಇಳಿಮುಖವಾಗಿ, ಈಗ ನಿತ್ಯದ ಸರಾಸರಿ ಮಾರಾಟದ ಗುರಿ ಕೂಡ ತಲುಪುತ್ತಿಲ್ಲ. ಕೋವಿಡ್ ಮೊದಲು ನಿತ್ಯ ಸರಾಸರಿ 1.75 ಲಕ್ಷ ಕಾರ್ಟನ್ ಐಎಂಎಲ್ ಹಾಗೂ 80 ಸಾವಿರ ಕೇಸ್ ಬೀಯರ್ ಮಾರಾಟವಾಗುತ್ತಿತ್ತು. ಈಗ ಅದರ ಅರ್ಧ ಕೂಡ ಹೋಗುತ್ತಿಲ್ಲ ಎಂದು ಮದ್ಯದಂಗಡಿ ಮಾಲೀಕರು ಗೋಳು ತೋಡಿಕೊಳ್ಳುತ್ತಿದ್ದಾರೆ.