ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 190ನೇ ಹುತಾತ್ಮ ದಿನಾಚರಣೆ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಿಕ್ಷಣ ನೀತಿಯಲ್ಲಿ ದೇಶ ಕಟ್ಟುವ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಕಲಿಕೆಯ ಹಂತದಲ್ಲೇ ರೂಪಿಸುವ ಅಂಶಗಳನ್ನು ಆದ್ಯತೆಯ ಮೇರೆಗೆ ಸೇರಿಸಲಾಗಿದೆ. ಇದಕ್ಕೆ ಪೂರಕವಾಗಿ ಮೌಲ್ಯಾಧಾರಿತ ಅಂಶಗಳೂ ಇದ್ದು, ಇವುಗಳ ಆಧಾರದ ಮೇಲೆಯೇ ನೂತನ ಶಿಕ್ಷಣ ನೀತಿ ರೂಪಿತವಾಗಿದೆ. ಈ ವರ್ಷದಿಂದಲೇ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ ಎಂದರು.
ಸಂಗೊಳ್ಳಿ ರಾಯಣ್ಣ ಅವರು ನಮ್ಮ ಅಂತರಾತ್ಮದ ಧ್ವನಿ. ನಿರಂತರ ಸ್ಫೂರ್ತಿ. ಅವರ ಕೆಚ್ಚು, ಅರ್ಪಣಾ ಮನೋಭಾವ, ದೇಶ ಭಕ್ತಿ ನಮಗೆಲ್ಲರಿಗೂ ಆದರ್ಶ. ತಾಯ್ನಾಡಿಗಾಗಿ ಹೋರಾಡುತ್ತಲೇ ಸಾವನ್ನು ತೃಣ ಸಮಾನವಾಗಿ ಕಂಡ ಆ ಮಹಾಪುರುಷನ ಬಗ್ಗೆ ನಾವು ಆರಾಧನಾ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಮಕ್ಕಳು ರಾಯಣ್ಣರಂಥ ಮಹಾಪುರುಷರಿಂದ ಪ್ರಭಾವಿತರಾಗಬೇಕು ಎಂದು ಉಪ ಮುಖ್ಯಮಂತ್ರಿ ಪ್ರತಿಪಾದಿಸಿದರು.
ಇವತ್ತು ಶಿಕ್ಷಣದಿಂದ ಸಮಾಜದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಸರ್ವ ಸಮಸ್ಯೆಗಳಿಗೂ ಶಿಕ್ಷಣವಷ್ಟೇ ದಿವ್ಯ ಔಷಧ ಎಂದ ಅವರು, ಪ್ರಸಕ್ತ ಕಾಲದಲ್ಲಿ ಸಮಾಜದಲ್ಲಿ ಭರವಸೆಯ ಕೊರತೆ ಇದೆ. ಆ ಕೊರತೆಯನ್ನು ನೀಗಿಸುವ ಶಕ್ತಿಯೂ ಹೊಸ ಶಿಕ್ಷಣ ನೀತಿಗೆ ಇದೆ ಎಂದು ಅಭಿಪ್ರಾಯಪಟ್ಟರು.
ಓದಿ : ಛಲಬೇಕು ಸಾಧಕನಿಗೆ.. ಕಾಲಿನಿಂದ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ದಿವ್ಯಾಂಗ..
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ಬಿಬಿಎಂಪಿ ಮಾಜಿ ಸದಸ್ಯ ರವೀಂದ್ರ ಮತ್ತಿತರರು ಭಾಗವಹಿಸಿದ್ದರು.