ಬೆಂಗಳೂರು: ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯ ಐಪಿಎಸ್ ಶ್ರೇಣಿಯ ಅಧಿಕಾರಿಗಳೊಂದಿಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಅಪರಾಧ ಪ್ರಕರಣಗಳ ಪರಿಶೀಲನಾ ಸಭೆ ನಡೆಸಿದರು.
ರಾಜಧಾನಿಯಲ್ಲಿ ನಡೆದ ಅಪರಾಧ ಪ್ರಕರಣಗಳ ಮಾಹಿತಿ, ಶಿಕ್ಷೆ ಪ್ರಮಾಣ ಸೇರಿದಂತೆ ಕಾನೂನು ಸುವ್ಯವಸ್ಥೆಗಳ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿಗಳಿಂದ ಈ ವೇಳೆ ಮಾಹಿತಿ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ 56ನೇ ಡಿಜಿ & ಐಜಿಪಿಗಳ ಸಭೆಯಲ್ಲಿ ಪ್ರವೀಣ್ ಸೂದ್ ಭಾಗಿಯಾಗಿದ್ದರು.ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ತಡೆಗೆ ಹಾಗೂ ಡ್ರಗ್ಸ್ ಪ್ರಕರಣದಲ್ಲಿ ಇಳಿಮುಖ ಹಾಗೂ ಅನಧಿಕೃತವಾಗಿ ವಾಸವಾಗಿರುವ ವಿದೇಶಿಯರನ್ನ ಗುರುತಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಡಿಜಿ ತಾಕೀತು ಮಾಡಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಸಭೆ ಮುಕ್ತಾಯಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರವೀಣ್ ಸೂದ್, ಎರಡು ದಿನಗಳ ಹಿಂದೆ ಲಕ್ನೋದಲ್ಲಿ ಡಿಜಿ & ಐಜಿಪಿ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿ ಬಂದಿದ್ದೇನೆ. ಅಲ್ಲಿ ಸಾಕಷ್ಟು ಮಹತ್ವದ ವಿಚಾರಗಳ ಬಗ್ಗೆ ಚರ್ಚೆಗಳಾಗಿವೆ. ಆ ಎಲ್ಲಾ ವಿಚಾರಗಳು ತಳಮಟ್ಟದ ಅಧಿಕಾರಿಗಳಿಗೆ ತಿಳಿಸಲು ಈ ಸಭೆ ಮಾಡಿದ್ದೇವೆ. ಮುಖ್ಯವಾಗಿ ಡ್ರಗ್ಸ್, ವಿದೇಶಿಗರ ಅಕ್ರಮ ವಾಸ್ತವ್ಯದ ವಿಚಾರವಾಗಿ ಚರ್ಚೆಗಳಾಗಿವೆ ಎಂದಿದ್ದಾರೆ.
ಸೈಬರ್ ಕ್ರೈಂ ನಿಯಂತ್ರಣ, ಹೊಸ ತಂತ್ರಜ್ಞಾನಗಳ ಬಳಕೆ ಬಗ್ಗೆ ಸೂಚನೆಗಳನ್ನ ನೀಡಿದ್ದಾರೆ. ಕೆಲವೊಂದು ಅಂಶಗಳ ಅಳವಡಿಕೆಗೆ ಅಡೆತಡೆಗಳಿವೆ. ಸರ್ಕಾರದ ಜೊತೆ ಸಹ ಚರ್ಚಿಸಬೇಕಿದೆ. ಆ ವಿಚಾರಗಳ ಬಗ್ಗೆ ಈಗಾಗಲೆದ ಚರ್ಚೆಗಳಾಗಿವೆ, ಮುಂದಿನ ಹಂತದಲ್ಲಿ ಎಸ್ಪಿಗಳ ಮಟ್ಟದಲ್ಲಿ ಸಭೆ ಮಾಡಲಿದ್ದೇವೆ. ಇದುವರೆಗಿನ ಕೆಲಸದ ಬಗ್ಗೆ ತೃಪ್ತಿ ಇದೆ ಎನ್ನಲು ಸಾಧ್ಯವಿಲ್ಲ, ನಮ್ಮದು ಥ್ಯಾಂಕ್ ಲೆಸ್ ಜಾಬ್. ಅನೇಕ ಸಂದರ್ಭಗಳಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸಿದ್ದೇವೆ.ಇತ್ತೀಚೆಗೆ ನಟ ಪುನೀತ್ ಸಾವಾದಾಗ ಸಹ ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.