ಬೆಂಗಳೂರು: ಹಿಂದೂ ಮಹಾಸಭಾ, ಮುಸ್ಲಿಂ ಲೀಗ್ ಹಾಗೂ ಆರ್ಎಸ್ಎಸ್ ದೇಶ ವಿಭಜನೆಗೆ ಕಾರಣ. ಅವರಿಗೆಲ್ಲ ಮುಸ್ಲಿಂ ರಾಷ್ಟ್ರ ಬೇಕಿತ್ತು. ಆದರೆ, ಬಿಜೆಪಿಯವರು ಇಂದು ರಾಷ್ಟ್ರಪ್ರೇಮ, ರಾಷ್ಟ್ರ ಭಕ್ತಿ ಅಂತಾ ಮಾತನಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿ ಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ 77ನೇ ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಯಾರೂ ಹೀರೋಗಳೇ ಇಲ್ಲ. ಅವರು ತಮಗೆ ಬೇಕಾದವರನ್ನು ಹೀರೋ ಮಾಡಿಕೊಂಡರು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಎಲ್ಲರನ್ನೂ ತಮ್ಮ ನಾಯಕರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನಾವು ಸ್ವಾತಂತ್ರ್ಯ ತರದೇ ಹೋಗಿದ್ದರೆ ನೀವು ಎಲ್ಲಿರುತ್ತಿದ್ರಿ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಶಾಸಕರ ಖರೀದಿಗೆ ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಹಾಗಾದರೆ ಆ ಹಣ ಎಲ್ಲಿಂದ ಬಂತು? ಅದು ಬ್ಲ್ಯಾಕ್ ಮನಿಯಾ, ವೈಟ್ ಮನಿಯಾ ಗೊತ್ತಿಲ್ಲ. ಜನರನ್ನು ದಾರಿತಪ್ಪಿಸುವುದೇ ಅವರ ಅಜೆಂಡಾ ಆಗಿದೆ. ಜನರನ್ನು ಭ್ರಮಾಲೋಕದಲ್ಲಿ ಮುಳುಗಿಸಿದ್ದಾರೆ. ದೇಶ ಆರ್ಥಿಕ ಸಂಕಷ್ಡಕ್ಕೊಳಗಾಗಿದೆ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಸಾವಿರಾರು ಕಂಪನಿಗಳು ಮುಚ್ಚಿ ಹೋಗುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ನಾಳೆ ಕಾರ್ಯಕಾರಿ ಸಮಿತಿ ಮೀಟಿಂಗ್ ಇದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಯಾರು ಅನ್ನೋದು ಗೊತ್ತಾಗಬೇಕಿದೆ. ನಂತರ ಪಕ್ಷ ಸಂಘಟನೆಗೆ ನಾವು ಹೆಚ್ಚು ಗಮನಹರಿಸಬೇಕು. ಪಕ್ಷ ಸಂಘಟನೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ವೈಯುಕ್ತಿಕ ಪ್ರತಿಷ್ಠೆ ಬಿಟ್ಟು ಪಕ್ಷಕ್ಕೆ ದುಡಿಯಬೇಕು. ಕಾಂಗ್ರೆಸ್ಗೆ ಮತಹಾಕುವ ಜನ ಇಲ್ಲಿದ್ದಾರೆ. ಕಾಂಗ್ರೆಸ್ ಮತ್ತೆ ಕಟ್ಟುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.