ಬೆಂಗಳೂರು : ಮಂಗಳೂರಿನ ಬೆಳ್ಳಾರೆಯಲ್ಲಿ ಇತ್ತೀಚೆಗೆ ಹತ್ಯೆಗೊಳಗಾಗಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರ ಭೇಟಿಗೆ ಮುಂದಾಗಿದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಹೊರಡಿಸಿದ್ದಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದ ಕ್ರಮ ಪ್ರಶ್ನಿಸಿ ಮುತಾಲಿಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಪ್ರಕರಣವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ವರ್ಗಾವಣೆ ಮಾಡಿದ್ದು, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಜಿಲ್ಲಾಡಳಿತ ಹೊರಡಿಸಿರುವ ಕ್ರಿಮಿನಲ್ ಪ್ರೊಸೀಡರ್ ಕೋಡ್ನ ಸೆಕ್ಷನ್ 144 ಪ್ರಕಾರ ಎರಡು ತಿಂಗಳ ಅವಧಿಗೆ ಮಾತ್ರ ನಿರ್ಬಂಧ ವಿಧಿಸುವುದಕ್ಕೆ ಅವಕಾಶವಿದೆ. ಈ ಅವಧಿ ಈಗಾಗಲೇ ಅವಧಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ವರ್ಗಾವಣೆ ಮಾಡಲಾಗುತ್ತಿದೆ. ಅಲ್ಲದೆ, ಅರ್ಜಿದಾರರ ವಾದ ಆಲಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.ಅಲ್ಲದೆ, ಪೊಲೀಸ್ ಆಯುಕ್ತರ ಹೊರಡಿಸಿದ್ದ ಆದೇಶದ ಅವಧಿ ಈಗಾಗಲೇ ಮುಗಿದಿದ್ದು, ವಿಚಾರಣೆಗೆ ಮಾನ್ಯತೆ ಕಳೆದುಕೊಂಡಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣ ಸಂಬಂಧ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರು ಹೊರಡಿಸಿರುವ ಆದೇಶ ನಿಯಮ ಬಾಹಿರವಾಗಿದೆ. ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಅಲ್ಲದೆ, ಅರ್ಜಿದಾರರಿಗೆ ಯಾವ ಕಾರಣಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂಬುದಕ್ಕೆ ವಿವರಣೆ ನೀಡಿಲ್ಲ. ಏಕಾಏಕಿ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಜಿಲ್ಲಾಡಳಿತದ ಈ ಆದೇಶ ರದ್ದು ಮಾಡಬೇಕು ಎಂದು ಕೋರಿದರು. ಜತೆಗೆ, ಅರ್ಜಿದಾರ ಪ್ರಮೋದ್ ಮುತಾಲಿಕ್ ಪ್ರವೀಣ್ ನೆಟ್ಟಾರು ಮನೆ ಭೇಟಿಗೆ ಅವಕಾಶ ನೀಡಿದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗಲಿದೆ ಎಂಬುದು ಉದ್ದೇಶವಾಗಿದೆ. ಆದರೆ, ಈ ಅಂಶವನ್ನು ಅರ್ಜಿದಾರರ ಗಮನ ತಂದಿಲ್ಲ ಎಂದು ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರನ್ನು ಜುಲೈ 28ರ ಸಂಜೆ 4 ಗಂಟೆಯಿಂದ ಮುಂದಿನ ಆದೇಶದವರೆಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿದಂತೆ ಜಿಲ್ಲಾಧಿಕಾರಿಗಳು ಜುಲೈ 28ರಂದು ಆದೇಶ ಹೊರಡಿಸಿದ್ದರು. ಇದರ ಮುಂದುವರಿದ ಭಾಗವಾಗಿ ಜುಲೈ 28ರಿಂದ ಆಗಸ್ಟ್ 3 ರವರೆಗೂ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾ ಪೊಲೀಸ್ ಆಯುಕ್ತರು ಆದೇಶಿಸಿದ್ದರು.
ಜುಲೈ 29 ರಂದು ಮಂಗಳೂರಿಗೆ ಆಗಮಿಸಿದ್ದು ಅವರನ್ನು ಪೊಲೀಸರು ತಡೆದು ಜಿಲ್ಲಾಡಳಿತ ಮತ್ತು ಪೊಲೀಸರು ಹೊರಡಿಸಿರುವ ಆದೇಶವನ್ನು ವಿವರಿಸಿದ್ದರು. ಇದಾದ ನಂತರ ಅರ್ಜಿದಾರರ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಷರತ್ತುಗಳನ್ನು ವಿಧಿಸಿ ಮೃತಪಟ್ಟ ಪ್ರವೀಣ್ ನೆಟ್ಟಾರು ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವುದಕ್ಕೆ ಮನವಿ ಮಾಡಿದ್ದರು. ಆದರೂ ಅವಕಾಶ ನೀಡದ ಹಿನ್ನೆಲೆಯಲ್ಲಿ ಈ ಬಗ್ಗೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ : ಪೀಣ್ಯ ಎಲಿವೇಟೆಡ್ ರಸ್ತೆ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣ: ಸಿಎಂ ಬಸವರಾಜ ಬೊಮ್ಮಾಯಿ