ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರದ ಆದೇಶ ರದ್ದು ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಜಿ ನರೇಂದರ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲಿ, ಸಿಬಿಐ ತನಿಖೆಗೆ ಅನುಮತಿ ಕೋರಿ 2019ರ 9ರಂದು ಜಾರಿ ನಿರ್ದೇಶನಾಲಯ ಮನವಿ ಸಲ್ಲಿಸಿದೆ. ಅದರಂತೆ ರಾಜ್ಯ ಸರ್ಕಾರ ಸೆಪ್ಟೆಂಬರ್ 25ರಂದು ಸಿಬಿಐ ತನಿಖೆಗೆ ಪೂರ್ವಾನುಮತಿ ನೀಡಿದೆ. ತನಿಖೆ ನಡೆಸಲು ಸಿಬಿಐ ಪರವಾಗಿ ಜಾರಿ ನಿರ್ದೇಶನಾಲಯ ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗೆಯೇ ಸರ್ಕಾರ ಪೂರ್ವಾನುಮತಿ ನೀಡುವ ಮುನ್ನ ದಾಖಲೆಗಳು ಮತ್ತು ಪ್ರಕರಣದ ವಿವರಗಳನ್ನು ಸರಿಯಾಗಿ ಪರಿಶೀಲಿಸಿಲ್ಲ. ಇಡಿ ದುರುದ್ದೇಶದಿಂದ ಸಲ್ಲಿಸಿರುವ ಅರ್ಜಿಯನ್ನು ರಾಜ್ಯ ಸರ್ಕಾರ ವಿವೇಚನಾರಹಿತವಾಗಿ ಪರಿಗಣಿಸಿದೆ. ಆದ್ದರಿಂದ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಡಿಕೆ ಶಿವಕುಮಾರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2017ರ ಆಗಸ್ಟ್ ತಿಂಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸೇರಿದ ಬೆಂಗಳೂರು ಮತ್ತು ದೆಹಲಿಯ ನಿವಾಸಗಳ ಮೇಲೆ ದಾಳಿ ಮಾಡಿ ಕೋಟ್ಯಂತರ ರೂಪಾಯಿ ಹಣ ಹಾಗೂ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಐಟಿ ಹಾಗೂ ಇಡಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದವು. ಬಳಿಕ ರಾಜ್ಯ ಸರ್ಕಾರ 2019ರ ಸೆಪ್ಟೆಂಬರ್ 25ರಂದು ಸಿಬಿಐ ತನಿಖೆಗೆ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸಲಾಗಿದೆ.