ಬೆಂಗಳೂರು : ತೀವ್ರ ಮಳೆಗಾಲ ಹಾಗೂ ಪ್ರವಾಹದ ಸಂದರ್ಭದಲ್ಲಿ ಯಾವುದೇ ರಾಜ್ಯದ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನೆರೆ ರಾಜ್ಯದ ಜಲಾಶಯಗಳಿಗೆ ಹರಿಸುವಾಗ ನೀರು ಹರಿದು ಹೋಗುವ ರಾಜ್ಯಗಳಿಗೆ ಕಡ್ಡಾಯವಾಗಿ ಮೊದಲೇ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ಬರುವವರೆಗೂ, ಈ ವಿಚಾರದ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ತುಮಕೂರಿನ ಚೇಳೂರು ನಿವಾಸಿ ಎ ಮಲ್ಲಿಕಾರ್ಜುನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಪ್ರವಾಹದಿಂದ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದ್ರೆ, ಯಾವುದೇ ಒಂದು ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡುವ ಬಗ್ಗೆ ನೀರು ಹರಿದು ಹೋಗುವ ರಾಜ್ಯಗಳಿಗೆ ಮೊದಲೇ ಮಾಹಿತಿ ನೀಡಬೇಕಾಗುತ್ತದೆ.
ಹೀಗೆ ಪೂರ್ವ ಮಾಹಿತಿ ನೀಡುವ ವ್ಯವಸ್ಥೆಯನ್ನು ರಾಷ್ಟ್ರೀಯ ಕಾರ್ಯಕಾರಿ ಪರಿಷತ್ತು ಜಾರಿಗೊಳಿಸಬೇಕು. ಈ ವಿಚಾರದಲ್ಲಿ ಕೈಗೊಂಡ ಮುಂದಿನ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚಿಸಿ ವಿಚಾರಣೆ ಮುಂದೂಡಿತು. ಅಲ್ಲದೇ, ಸೂಕ್ತ ನಿಯಮಗಳನ್ನು ಸಿದ್ಧಪಡಿಸಿ ಜಾರಿ ಮಾಡುವವರೆಗೂ ಒಂದು ರಾಜ್ಯದ ಡ್ಯಾಂಗಳಿಂದ ಮತ್ತೊಂದು ರಾಜ್ಯದ ಜಲಾಶಯಗಳಿಗೆ ಹರಿಸುವ ವಿಚಾರವನ್ನು ಎನ್ಡಿಎಂಎ ಜವಾಬ್ದಾರಿ ತೆಗೆದುಕೊಂಡು ಅನಾಹುತಗಳಾಗದಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಪ್ರಕರಣದ ಹಿನ್ನೆಲೆ : ಮಳೆಗಾಲ ಮತ್ತು ಪ್ರವಾಹದಂತಹ ಪರಿಸ್ಥಿತಿಗಳಲ್ಲಿ ಯಾವುದೇ ಅಣೆಕಟ್ಟುಗಳಿಂದ ಪೂರ್ವ ಮಾಹಿತಿ ನೀಡದೆ ನೀರು ಹೊರಬಿಟ್ಟಾಗ ಪ್ರವಾಹ ಹರಿದು ಹೋಗುವ ಮಾರ್ಗದ ರಾಜ್ಯಗಳಲ್ಲಿ ಹೆಚ್ಚಿನ ಹಾನಿ, ಸಾವು-ನೋವು ಸೃಷ್ಟಿಸುತ್ತದೆ. ಆದ್ದರಿಂದ ಡ್ಯಾಮ್‌ಗಳಿಂದ ನೀರು ಹೊರಬಿಡುವ ಮುನ್ನ ನದಿ ಹರಿದು ಹೋಗುವ ರಾಜ್ಯಗಳಿಗೆ ಪೂರ್ವ ಮಾಹಿತಿ ನೀಡಬೇಕು.
ಆದರೆ, ನಮ್ಮ ದೇಶದಲ್ಲಿ ಅಂತಹ ಯಾವುದೇ ನಿಯಮ ಇದ್ದಂತೆ ಕಾಣುವುದಿಲ್ಲ. ಇದರಿಂದಾಗಿಯೇ, ರಾಜ್ಯದಲ್ಲಿ 2009 ಮತ್ತು 2018ರಲ್ಲಿ ಭೀಕರ ಪ್ರವಾಹ ಎದುರಾಗಿತ್ತು. ಇಂತಹ ಸ್ಥಿತಿ ಮತ್ತೆ ನಿರ್ಮಾಣವಾಗದಂತೆ ಕ್ರಮಕೈಗೊಳ್ಳುವ ತುರ್ತು ಅವಶ್ಯಕತೆ ಇದ್ದು, ಶಾಶ್ವತ ವ್ಯವಸ್ಥೆ ರೂಪಿಸುವಂತೆ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.