ಬೆಂಗಳೂರು: ಚುನಾವಣಾ ಕಾವೇರಿದ್ದ ರಾಜಧಾನಿಗೆ ಮಳೆರಾಯ ತಂಪೆರೆದಿದ್ದಾನೆ. ನಗರದ ಹಲವೆಡೆ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ದಕ್ಷಿಣ ಒಳನಾಡಿನಿಂದ ಕನ್ಯಾಕುಮಾರಿಯವರೆಗೆ ವಾತಾವರಣದಲ್ಲಿ ಕಡಿಮೆ ಒತ್ತಡ ಇರುವುದರಿಂದ ಮಳೆಯಾಗುತ್ತಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಹೆಚ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ಮಲ್ಲೇಶ್ವರಂ, ಶಿವಾಜಿನಗರ, ಜಯನಗರ, ಕೆ.ಆರ್. ಮಾರ್ಕೆಟ್, ವಸಂತನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಅನಿರೀಕ್ಷಿತವಾಗಿ ಮಳೆರಾಯ ಆರ್ಭಟಿಸಿದ್ದರಿಂದ ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ದಟ್ಟಣೆ ಉಂಟಾಯಿತು. ವಾಹನ ಸವಾರರು ಪರದಾಟ ನಡೆಸಬೇಕಾಯಿತು.
ವರ್ಷಧಾರೆ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ಜಲಾವೃತಗೊಂಡ ದೃಶ್ಯಾವಳಿಗಳು ಸಾಮಾನ್ಯವಾಗಿದ್ದವು. ಹೆಣ್ಣೂರು, ಹೆಚ್ಎಸ್ಆರ್ ಲೇಔಟ್ಗಳಲ್ಲಿ ಟೆಂಡರ್ ಶ್ಯೂರ್, ರಾಜಕಾಲುವೆಗಳ ದುರಸ್ತಿ ನಡೆಯುತ್ತಿದ್ದರಿಂದ ಚರಂಡಿ ನೀರು ಸರಾಗವಾಗಿ ಹರಿಯದೆ ರಸ್ತೆಗಳಲ್ಲೇ ತುಂಬಿಕೊಂಡಿತು. ಇದರಿಂದಾಗಿ ಈ ಭಾಗಗಳ ಕೆಲವೆಡೆ ದ್ವಿಚಕ್ರ ವಾಹನಗಳು ಭಾಗಶಃ ನೀರಿನಲ್ಲಿ ಮುಳುಗಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿಯೂ ಮಳೆಯಾಗಿದೆ. ಸಂಜೆ ಪಟ್ಟಣದ ಸುತ್ತಮುತ್ತ ಗುಡುಗು ಸಹಿತ ಭಾರಿ ಮಳೆ ಬಿದ್ದಿದೆ. ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಬಿಸಿಲಿನಿಂದ ಕೆಂಗೆಟ್ಟಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿತು.
ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ 5 ದಿನಗಳ ಕಾಲ ಮಳೆಯಾಗೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.