ಬೆಂಗಳೂರು: ಬಡವರಿಗೆ ಸಹಾಯ ಮಾಡಲು ಎಷ್ಟು ಸಾಧ್ಯವೋ ಅದನ್ನು ನಾವು ಮಾಡುತ್ತಿದ್ದೇವೆ. ನಗರ ಪ್ರದೇಶದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ಸರ್ಕಾರ ವಿಶೇಷ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಸತಿ ಇಲಾಖೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಲಗ್ಗೇರಿಯ ಕೊಳಗೇರಿ ವಸತಿ ಸಮುಚ್ಚಯ ಪ್ರದೇಶದ ಲಕ್ಷ್ಮಿ ದೇವಿನಗರ ಬಸ್ ನಿಲ್ದಾಣದ ಬಳಿ ಆಯೋಜಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೊಳಗೇರಿ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ - ಸರ್ವರಿಗೂ ಸೂರು ಯೋಜನೆಯಡಿ 1,588 ಮನೆಗಳ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯ ನೆರವೇರಿಸಿ ನಂತರ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರವು 52 ಸಾವಿರ ಮನೆಗಳನ್ನು ಪೂರ್ತಿ ಮಾಡಿದ್ದು, ಇನ್ನು 50 ಸಾವಿರ ಮನೆಗಳಿಗೆ ನಾವು ಈ ವರ್ಷ ಕಾರ್ಯಾದೇಶ ನೀಡಿದ್ದೇವೆ ಎಂದರು.
ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬೆಂಗಳೂರಿಗೆ ನಗರೋತ್ಥಾನ ಯೋಜನೆ ಘೋಷಿಸಿ, ಕೊಳಚೆ ಪ್ರದೇಶಗಳ ಅಭಿವೃದ್ಧಿಯಾಗಬೇಕು, ಬಡವರು ಇರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಕೆರೆಗಳ ರಕ್ಷಣೆಯಾಗಬೇಕು ಎನ್ನುವ ವಿಚಾರಗಳನ್ನು ಸೇರಿಸಲಾಯಿತು. ಅದರ ಭಾಗವಾಗಿ ಇಂದು 1,588 ಜನರಿಗೆ ಮನೆಗಳ ನಿರ್ಮಾಣ ಕಾಮಗಾರಿಯಾಗಲಿದೆ ಎಂದರು.
ಬಡವರಿಗಾಗಿ 5 ಸಾವಿರ ಎಕರೆ ಸರ್ಕಾರಿ ಜಮೀನು ಮೀಸಲು: ಬಡವರ ತಲೆ ಮೇಲೆ ಸೂರಿಲ್ಲ ಎನ್ನುವುದು ದೇಶವ್ಯಾಪಿ ಸಮಸ್ಯೆ. ಇದನ್ನು ಹೋಗಲಾಡಿಸುವ ದೊಡ್ಡ ಪ್ರಯತ್ನ ರಾಜ್ಯದಲ್ಲಿ ಆಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಬೃಹತ್ ಪ್ರಮಾಣದಲ್ಲಿ ತೆಗೆದುಕೊಂಡು ಮುಂದಿನ 5 ವರ್ಷಗಳಲ್ಲಿ ಎಲ್ಲರ ತಲೆಯ ಮೇಲೆ ಸೂರು ಇರಬೇಕೆನ್ನುವ ವಿಚಾರವನ್ನಿಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ಕರ್ನಾಟಕದಲ್ಲಿ ದೇವರಾಜ ಅರಸು ಅವರ ಕಾಲದಿಂದಲೂ ಮನೆಗಳ ನಿರ್ಮಾಣಕ್ಕೆ ವಿಶೇಷ ಪ್ರಯತ್ನಗಳಾಗಿವೆ. ಆದರೆ, ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಮನೆಗಳ ನಿರ್ಮಾಣ ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಈಗ 5 ಲಕ್ಷ ಮನೆ ಪೂರ್ಣಗೊಳಿಸುತ್ತಿದೆ. ಕಟ್ಟಿರುವ ಮನೆಗಳನ್ನು ಪೂರ್ಣಗೊಳಿಸುವ ಸಂಕಲ್ಪವನ್ನ ಸರ್ಕಾರ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 1.75 ಲಕ್ಷ ನೀಡುತ್ತಿದ್ದ ಮೊತ್ತವನ್ನು 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಜಮೀನಿನ ಸಮಸ್ಯೆ ಬಗೆಹರಿಸಲು 5000 ಸರ್ಕಾರಿ ಜಮೀನು ಗುರುತಿಸಲಾಗಿದ್ದು, ಬಡವರಿಗಾಗಿ ಇದನ್ನು ಮೀಸಲಿಟ್ಟು, ಅಲ್ಲಿ ನಿವೇಶನ ಮತ್ತು ಮನೆ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.
ಕಾಲಮಿತಿಯಲ್ಲಿ ಮನೆಗಳ ನಿರ್ಮಾಣ: ಪರಿಹಾರದ ರಾಜಕಾರಣವಾಗಬೇಕು, ಚರ್ಚೆಯ ರಾಜಕಾರಣವಲ್ಲ. ಸಮಸ್ಯೆ ಇದ್ದಲ್ಲಿಗೆ ಹೋಗಿ ಅರಿವಿನಿಂದ ಕೆಲಸ ಮಾಡಬೇಕು. 1588 ಮನೆ ನಿರ್ಮಾಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಮುಂದಿನ ದಿನಗಳಲ್ಲಿ ವಸತಿ ಇಲಾಖೆ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಕೊಳಚೆ ಪ್ರದೇಶಗಳ ಎಲ್ಲ ಮನೆಗಳಿಗೂ ಕಾಯಕಲ್ಪ ನೀಡಬೇಕು ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ರಾಜಕೀಯ ದಲ್ಲಾಳಿ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ