ಬೆಂಗಳೂರು: ನಿಮ್ಮ ಮನೆಯ ಮಹಡಿ ಮೇಲೆ ಹೆಚ್ಚುವರಿ ಅಂತಸ್ತು ನಿರ್ಮಾಣ ಮಾಡಬೇಕಾ?. ಆ ಹಾದಿಯನ್ನು ಸುಗಮಗೊಳಿಸಲು ಸರ್ಕಾರ ಮುಂದಾಗಿದೆ. ಹೆಚ್ಚುವರಿ ಅಂತಸ್ತು ನಿರ್ಮಾಣಕ್ಕೆ ಅನುಮತಿ ನೀಡುವ ಪ್ರೀಮಿಯಂ ಫ್ಲೋರ್ ಏರಿಯಾ ರೇಷಿಯೋ ಸಂಬಂಧ ಸರ್ಕಾರ ಕರಡು ನಿಯಮವನ್ನು ರೂಪಿಸಿದೆ.
ನಿವೇಶನ ಮಾಲೀಕರು ಫ್ಲೋರ್ ಏರಿಯಾ ರೇಷಿಯೋ (ಎಫ್ಎಆರ್) ಆಧಾರದಲ್ಲಿ ಮನೆ ನಿರ್ಮಿಸಬೇಕು. ಮನೆಯ ಅಂತಸ್ತು ವಿಸ್ತೀರ್ಣ ಅನುಪಾತದ ಸಂಕ್ಷಿಪ್ತ ರೂಪವೇ ಎಫ್‌ಎಆರ್. ಎಲ್ಲ ಅಂತಸ್ತುಗಳ ಒಟ್ಟು ವಿಸ್ತೀರ್ಣವನ್ನು ನಿವೇಶನದ ವಿಸ್ತೀರ್ಣದಿಂದ ಭಾಗಿಸಿ ಎಫ್‌ಎಆರ್ ಲೆಕ್ಕಹಾಕಲಾಗುತ್ತದೆ. ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರ ನಿಗದಿಗೊಳಿಸಿರುವ ಎಫ್ಎಆರ್ ಮಿತಿಯಲ್ಲೇ ನಿವೇಶನದಾರರು ತಮ್ಮ ಮನೆಯ ಅಂತಸ್ತು ಕಟ್ಟಬೇಕು. ಸದ್ಯ ಬೆಂಗಳೂರು ಮಾಸ್ಟರ್ ಪ್ಲಾನ್ ಪ್ರಕಾರ ಗರಿಷ್ಠ ಅನುಮೋದಿತ ಎಫ್ಎಆರ್ 3.25 ಇದೆ.
ಎಫ್ಎಆರ್ ಮಿತಿಯಿಂದ ಹೆಚ್ಚಿಗೆ ಅಂತಸ್ತನ್ನು ಕಟ್ಟಲು ಅನುಮತಿ ಇಲ್ಲ. ಇದೀಗ ಸರ್ಕಾರ ಹೆಚ್ಚುವರಿ ಅಂತಸ್ತು ನಿರ್ಮಿಸುವ ಹಾದಿ ಸುಗಮಗೊಳಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪ್ರೀಮಿಯಂ ಎಫ್ಎಆರ್ ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ಕರಡು ನಿಯಮಾವಳಿಯನ್ನು ಹೊರಡಿಸಿದ್ದು, ಸಾರ್ವಜನಿಕರ ಅಭಿಪ್ರಾಯ, ಸಲಹೆಯನ್ನು ಕೇಳಿದೆ. ಪ್ರೀಮಿಯಂ ಎಫ್ಎಆರ್ ಖರೀದಿಸುವ ನಿವೇಶನದಾರರು ಹೆಚ್ಚುವರಿ ನಿರ್ಮಾಣ ಪ್ರದೇಶದ ಮಾರ್ಗಸೂಚಿ ದರದ ಶೇ 50ರಷ್ಟು ಮೊತ್ತವನ್ನು ಪಾವತಿಸಬೇಕು ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ.
ಪ್ರೀಮಿಯಂ ಎಫ್ಎಆರ್ ನಿಂದ ಸರ್ಕಾರದ ಆದಾಯ ಹೆಚ್ಚಲಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಕರ್ನಾಟಕ ಯೋಜನಾ ಪ್ರಾಧಿಕಾರ (ತಿದ್ದುಪಡಿ) ನಿಯಮ 2020ರ ಕರಡನ್ನು ಪ್ರಕಟಿಸಿದೆ. ಕರಡು ನಿಯಮ ಹೇಳುವಂತೆ ಎಲ್ಲ ಪಾಲಿಕೆಗಳು ಅನುಮೋದಿತ ಮಾಸ್ಟರ್ ಪ್ಲಾನ್ ವ್ಯಾಪ್ತಿ ಪ್ರದೇಶದಲ್ಲಿನ ಸಾರಿಗೆ ಮೂಲ ಸೌಕರ್ಯ ಯೋಜನೆಗಳು ಮತ್ತು ಇತರ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಂದ ಪ್ರಭಾವಕ್ಕೊಳಗಾಗುವ ವಲಯಗಳಲ್ಲಿ ಹೆಚ್ಚುವರಿ ಎಫ್ಎಆರ್ ದರ ವಿಧಿಸಬಹುದಾಗಿದೆ. ಈ ನಿಯಮ ರಾಜ್ಯದ ಎಲ್ಲ ನಗರಗಳಿಗೆ ಅನ್ವಯವಾಗಲಿದೆ. ಕರಡು ನಿಯಮದಂತೆ ಪ್ರೀಮಿಯಂ ಎಫ್ಎಆರ್ ಹಾಗೂ ಪ್ರೀಮಿಯಂ ಎಫ್ಎಆರ್ ದರ ಲೆಕ್ಕಾಚಾರ ಈ ಕೆಳಗಿನಂತಿದೆ.
ಪ್ರೀಮಿಯಂ ಎಫ್ಎಆರ್ ಲೆಕ್ಕಾಚಾರ ಹೇಗೆ?:
ಪ್ರೀಮಿಯಂ ಎಫ್ಎಆರ್ ನ್ನು ಹೆಚ್ಚುವರಿ ಭೂಮಿ ಮತ್ತು ಕಟ್ಟಡದ ಮಾರ್ಗಸೂಚಿ ಬೆಲೆ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.
ಒಂದು ವೇಳೆ, ಕಟ್ಟಡ ನಿವೇಶನದ ಒಟ್ಟು ವಿಸ್ತೀರ್ಣ 1,000 ಚದರ ಮೀಟರ್ ಇದ್ದು, ಅನುಮೋದಿತ ಎಫ್ಎಆರ್ 2.5 ಆಗಿದ್ದರೆ, ಅದರಂತೆ ಒಟ್ಟು ಅನುಮತಿಸಲಾಗುವ ಕಟ್ಟಡ ನಿರ್ಮಾಣದ ಪ್ರದೇಶ 2,500 ಚ.ಮೀಟರ್ ಆಗಿರಲಿದೆ.
1.0 ಪ್ರೀಮಿಯಂ ಎಫ್ಎಆರ್ ನಡಿ ಅನುಮತಿಸಲಾಗುವ ಹೆಚ್ಚವರಿ ನಿರ್ಮಾಣ ಪ್ರದೇಶ-1000 ಚ.ಮೀಟರ್
ನಿವೇಶನದ ಮಾರ್ಗಸೂಚಿ ದರ 50,000 ರೂ. ಆಗಿದ್ದರೆ, ಹೆಚ್ಚುವರಿ ಅಂತಸ್ತು ನಿರ್ಮಾಣ ಪ್ರದೇಶದ ಮಾರ್ಗಸೂಚಿ ಬೆಲೆ 13,000 ರೂ.
ಪ್ರೀಮಿಯಂ ಎಫ್ಎಆರ್ ಲೆಕ್ಕ ಹಾಕಲು ಪರಿಗಣಿಸಲಾಗುವ ಹೆಚ್ಚುವರಿ ನಿವೇಶನ ಪ್ರದೇಶ- 1000ಚ.ಮೀ÷2.5(Total area÷FAR)= 400 ಚ.ಮೀ.
ಪ್ರೀಮಿಯಂ ಎಫ್ಎಆರ್ ದರ ಲೆಕ್ಕ ಹೇಗೆ?:
ಹೆಚ್ಚುವರಿ ಭೂಮಿಯ ಮಾರ್ಗಸೂಚಿ ಬೆಲೆ- 50,000× 400ಚ.ಮೀ= 2 ಕೋಟಿ ರೂ.
ಹೆಚ್ಚುವರಿ ಕಟ್ಟಡದ ಮಾರ್ಗಸೂಚಿ ಬೆಲೆ- 13,000 × 1,000 ಚ.ಮೀ.= 1.3 ಕೋಟಿ ರೂ.
1000 ಚ.ಮೀ. ಹೆಚ್ಚುವರಿ ಭೂಮಿ ಮತ್ತು ಕಟ್ಟಡ ಬೆಲೆಯ ಶೇ 50ರಲ್ಲಿ ಪ್ರೀಮಿಯಂ ಎಫ್ಎಆರ್ ದರ= 1.65 ಕೋಟಿ ರೂ. (2 ಕೋಟಿ +1.3 ಕೋಟಿ×50%)
ಪ್ರತಿ ಚದರ ಮೀಟರ್ ಗೆ ಪ್ರೀಮಿಯಂ ಎಫ್ಎಆರ್ ದರ= 16,500 ರೂ.