ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಒಂದಂಕಿ ಲಾಟರಿ ಪ್ರಕರಣದಲ್ಲಿ ಹಾಲಿ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಈ ಬೆನ್ನಲೇ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ನನ್ನನ್ನು ಸಿಲುಕಿಸಲಾಗಿತ್ತು. ನನ್ನ ಮೇಲೆ ಆರೋಪ ಕೇಳಿಬಂದಾಗಿನಿಂದಲೂ ನಾನು ಯಾರನ್ನು ನಂಬಿರಲಿಲ್ಲ. ನಾನು ನಂಬಿದ್ದು ದೇವರನ್ನು. ಆ ದೇವರು ನನ್ನ ಕೈಬಿಡಲಿಲ್ಲ. ಪ್ರಕರಣದಲ್ಲಿ ನನಗೆ ಜಯ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದರು.
ನಾನು ಪ್ರಮಾಣಿಕವಾಗಿದ್ದೆ. ದೇವರು ನನ್ನ ಕೈಬಿಟ್ಟಿಲ್ಲ. ನನ್ನ ಮೇಲಿನ ಆರೋಪದಿಂದ ನನ್ನ ಕುಟುಂಬ ತೀವ್ರ ದುಃಖಕ್ಕೆ ಒಳಗಾಗಿತ್ತು. ಮಾನಸಿಕವಾಗಿ ತುಂಬಾ ನೊಂದಿದ್ದೆವು. ಬರಬೇಕಿದ್ದ ಸಂಬಳ, ಪ್ರಶಸ್ತಿ ಕೈತಪ್ಪಿದವು. ಅಮೆರಿಕಾದಿಂದ ಬರಬೇಕಿದ್ದ ಸ್ಕಾಲರ್ಶಿಪ್ ಕೈತಪ್ಪಿತು. ಆದರೂ ಕರ್ನಾಟಕದ ಜನತೆ ನನ್ನ ಮೇಲೆ ವಿಶ್ವಾಸ ಇಟ್ಟಿದ್ದರು. ಕೆಲವು ಪೊಲೀಸ್ ಅಧಿಕಾರಿಗಳು ನನ್ನ ವೃತ್ತಿ ಜೀವನವನ್ನು ಮುಗಿಸಲು ಪಣ ತೊಟ್ಟಿದ್ದರು. ಮೊದಲಿನಿಂದಲೂ ನಾನು ಪ್ರಾಮಾಣಿಕನಾಗಿದ್ದೆ. ಈಗ ಜಯ ಸಿಕ್ಕಿದೆ. ನನ್ನ ಪ್ರಾಮಾಣಿಕತೆ ನನ್ನನ್ನು ಈ ಸ್ಥಾನಕ್ಕೆ ನಿಲ್ಲಿಸಿದೆ ಎಂದರು.
ಒಂದಂಕಿ ಲಾಟರಿ ಪ್ರಕರಣದಲ್ಲಿ ಕಳೆದ ಜ.21ರಂದು ಬೆಂಗಳೂರಿನ ಸಿಬಿಐ ಕೋರ್ಟ್ಗೆ ನಿವೃತ್ತ ಐಜಿ ಸೇರಿ ಹತ್ತು ಪೊಲೀಸರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು. ಸುಳ್ಳು ಕೇಸ್ ಆರೋಪದಡಿ ಎಡಿಜಿಪಿ ಅಲೋಕ್ ಕುಮಾರ್ ಮತ್ತು ನಿವೃತ್ತ ಎಸ್ಪಿ ಧರಣೇಂದ್ರಗೆ ಕ್ಲೀನ್ ಚಿಟ್ ನೀಡಿದೆ.