ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಉರಿಯೂತ(ಇನ್ಫ್ಲೆಮೇಟರಿ) ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಮಾರತ್‌ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯು ಇದಕ್ಕೆಂದೆ ಪ್ರತ್ಯೇಕ ಚಿಕಿತ್ಸೆ ನೀಡುವ ಆಸ್ಪತ್ರೆಗೆ ಚಾಲನೆ ನೀಡಿದೆ.
ಉರಿಯೂತ ಕಾಯಿಲೆಗೆ ಚಿಕಿತ್ಸೆ ನೀಡಲೆಂದೆ ಆರಂಭವಾಗಿರುವ ಈ ಆಸ್ಪತ್ರೆಯು ಮಕ್ಕಳಲ್ಲಿ ಕಂಡು ಬರುವ ತೀವ್ರತರದ ಉರಿಯೂತ ಸಮಸ್ಯೆಗಳಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲದ ವಿಶೇಷ ಚಿಕಿತ್ಸೆ ನೀಡಲಿದೆ.
ಕ್ಲಿನಿಕ್ ಉದ್ಘಾಟಿಸಿ ರೈನ್ ಬೋ ಮಕ್ಕಳ ಆಸ್ಪತ್ರೆಯ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಹಾಗೂ ಕ್ಲಸ್ಟರ್ ಹೆಡ್ ನೀರಜ್ ಲಾಲ್ ಮಾತನಾಡಿ, ಉರಿಯೂತ ಕಾಯಿಲೆಯು ಸಾಮಾನ್ಯ ಸಮಸ್ಯೆ. ಆದರೆ, ಸೂಕ್ತ ಸಮಯದಲ್ಲಿ ಇದರ ರೋಗ ಲಕ್ಷಣಗಳನ್ನು ಗುರುತಿಸದ ಕಾರಣ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತವೆ. ಹೀಗಾಗಿ ತಜ್ಞ ವೈದ್ಯರು ಇಂತಹ ಸೂಕ್ಷ್ಮ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ರೈನ್ ಬೋ ಮಕ್ಕಳ ಆಸ್ಪತ್ರೆಯು ಪ್ರಾರಂಭಿಸಿದೆ ಎಂದರು.
ಮಕ್ಕಳ ಕೀಲುರೋಗ ತಜ್ಞೆ ಡಾ.ಚಂದ್ರಿಕಾ ಭಟ್ ಮಾಹಿತಿ ನೀಡಿ, ನಾವು ಭಾರತದಾದ್ಯಂತ ಗಮನಿಸಿದಾಗಲೂ ಮಕ್ಕಳಿಗಾಗಿಯೇ ಕೀಲುರೋಗ ಸಮಸ್ಯೆಗಳಿಗೆಂದೆ ಪ್ರತ್ಯೇಕ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿವೆ. ನಮಗೆ ತಿಳಿದಂತೆ ಇತ್ತೀಚಿನ ದಿನಗಳಲ್ಲಿ ಸ್ವಯಂ ನಿರೋಧಕತೆ ಮತ್ತು ಉರಿಯೂತದಂತಹ ಕಾಯಿಲೆಗಳ ಪ್ರಮಾಣ ಹೆಚ್ಚಾಗುತ್ತಿದೆ.
ಕಾಯಿಲೆಯು ದೇಹದ ಯಾವುದೇ ಭಾಗದಲ್ಲಿಯೂ ಕೂಡಾ ಕಂಡು ಬರಬಹುದಾಗಿದೆ. ಮಕ್ಕಳಲ್ಲಿ ಕೀಲುನೋವು, ರಕ್ತನಾಳಗಳು ಮತ್ತು ಕಣ್ಣುಗಳು ಸಾಮಾನ್ಯವಾಗಿ ಉರಿಯೂತ ಸಮಸ್ಯೆಗೆ ತುತ್ತಾಗುವ ದೇಹದ ಭಾಗಗಳಾಗಿವೆ. ಮಕ್ಕಳಲ್ಲಿ ಈ ಕಾಯಿಲೆಯು ಹೆಚ್ಚಾಗಿ ಕಂಡು ಬರುತ್ತಿದೆ. ಬಹುಶಃ ಇದಕ್ಕೆ ಕಾರಣ ಸಾರ್ವಜನಿಕರಲ್ಲಿ ಇದರ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಮತ್ತು ನುರಿತ ವೈದ್ಯರು ಕಾಯಿಲೆಯನ್ನು ಸುಲಭವಾಗಿ ಗುರುತಿಸುತ್ತಿರುವುದು ಕೂಡಾ ಕಾರಣವಾಗಿರಬಹುದು ಎಂದರು.