ಬೆಂಗಳೂರು: ಫ್ಲೈ ಓವರ್ ಮುಖ್ಯ ರಸ್ತೆಯನ್ನು ಬಂದ್ ಮಾಡಿದ ಪರಿಣಾಮ ಪೀಣ್ಯ ಬಳಿಯ ತುಮಕೂರು ರಸ್ತೆಯಲ್ಲಿ ಮತ್ತಷ್ಟು ಟ್ರಾಫಿಕ್ ಜಾಮ್ ಕಂಡು ಬರುತ್ತಿದೆ.
ಸುಮಾರು 45 ದಿನ ಮೇಲ್ಸೇತುವೆ ಬಂದ್ ಮಾಡಲಾಗಿತ್ತು. ಭಾನುವಾರ ತಡಾರಾತ್ರಿಯಿಂದ ಮುಖ್ಯರಸ್ತೆ ಕೂಡ ಬಂದ್ ಮಾಡಲಾಗಿದೆ. ಕೇವಲ ಸರ್ವಿಸ್ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪೀಣ್ಯ ಮೇಲ್ಸೇತುವೆಯಲ್ಲಿ ಇಂದಿನಿಂದ ಲೋಡ್ ಟೆಸ್ಟಿಂಗ್ ಆರಂಭವಾಗಿದೆ. ನಿರಂತರವಾಗಿ ಮುಂದಿನ 48 ಘಂಟೆಗಳ ಕಾಲ ಪರೀಕ್ಷೆ ನಡೆಯಲಿದೆ. 8ನೇಯ ಮೈಲಿಯಿಂದ ಟೋಲ್ ಗೇಟ್ ವರೆಗೂ ಮುಖ್ಯ ರಸ್ತೆಯನ್ನು ಎರಡೂ ಬದಿಯಲ್ಲಿ ಮುಚ್ಚಲಾಗಿದ್ದು, ಸರ್ವೀಸ್ ರಸ್ತೆಯಲ್ಲಿ ಮಾತ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ವಾರಾಂತ್ಯಕ್ಕೆ ಸಂಚಾರಕ್ಕೆ ಮುಕ್ತ: ದುರಸ್ತಿ ಕೆಲಸದ ಹಿನ್ನೆಲೆ ಕಳೆದ ವರ್ಷ ಡಿಸೆಂಬರ್ 25 ರಿಂದ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ನನ್ನು ಬಂದ್ ಮಾಡಲಾಗಿತ್ತು. ಈ ಹಿಂದೆ ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪಶ್ಚಿಮ ಸಂಚಾರಿ ವಿಭಾಗದ ಡಿಸಿಪಿ ಕುಲ್ ದೀಪ್ ಜೈನ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಈ ವಾರಾಂತ್ಯದಲ್ಲಿ ಪೀಣ್ಯ ಮೇಲ್ಸೇತುವೆ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ತಿಳಿಸಿದ್ದಾರೆ.
ಪೀಣ್ಯ ಮೇಲ್ಸೇತುವೆಯಲ್ಲಿ ಭಾನುವಾರದಿಂದ ಲೋಡ್ ಟೆಸ್ಟಿಂಗ್ ಆರಂಭ ಮಾಡಿದ್ದೇವೆ. ನಿರಂತರವಾಗಿ ಮುಂದಿನ 48 ಘಂಟೆ ಪರೀಕ್ಷೆ ನಡೆಸಲಾಗುವುದು. 8ನೇಯ ಮೈಲಿಯಿಂದ ಟೋಲ್ವರೆಗೂ ಮುಖ್ಯ ರಸ್ತೆಯನ್ನು ಎರಡೂ ಬದಿಯಲ್ಲಿ ಮುಚ್ಚಲಾಗಿದೆ. ಸರ್ವೀಸ್ ರಸ್ತೆಯಲ್ಲಿ ಮಾತ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಡಿಸಿಪಿ ಕುಲ್ ದೀಪ್ ಜೈನ್ ಪತ್ರದ ಪೂರ್ಣ ವಿವರ: 2021 ರ ಡಿಸೆಂಬರ್ 25 ರಂದು ದುರಸ್ತಿ ಕಾಮಗಾರಿ ಪ್ರಾರಂಭವಾಗಿದ್ದು, 40 ದಿನ ಕಳೆದರೂ ಕಾಮಗಾರಿ ಮುಗಿದಿಲ್ಲ. ಈ ಹಿನ್ನೆಲೆ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗಿದ್ದು, ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಘರ್ಷಣೆ ಉಂಟಾಗುತ್ತಿದೆ. ಆ್ಯಂಬುಲೆನ್ಸ್ ಸೇರಿದಂತೆ ತುರ್ತು ಅಗತ್ಯ ವಾಹನಗಳ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತಿದೆ ಎಂದು ಜನವರಿ 25 ರಂದು ಡಿಸಿಪಿ ಕುಲ್ ದೀಪ್ ಜೈನ್ ಪತ್ರ ಬರೆದಿದ್ದರು.
ಇದನ್ನೂ ಓದಿ: ಕೊರೊನಾ ವಿರುದ್ಧ ಭಾರತಕ್ಕೆ ಮತ್ತೊಂದು ಅಸ್ತ್ರ: ಸ್ಪುಟ್ನಿಕ್ ಲೈಟ್ ಲಸಿಕೆಯ ತುರ್ತು ಬಳಕೆಗೆ ಅಸ್ತು
ಫ್ಲೈ ಓವರ್ ಮೇಲೆ ಪ್ರತಿ ದಿನ 2 ಲಕ್ಷ ವಾಹನಗಳು ಓಡಾಟ ನಡೆಸುತ್ತಿದ್ದವು. ಮೇಲ್ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದ ತುಮಕೂರು ರಸ್ತೆಯಲ್ಲಿ ವಾಹನ ದಟ್ಟಣೆ ದುಪ್ಪಟ್ಟಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಫ್ಲೈ ಓವರ್ನಲ್ಲಿ ಆ್ಯಂಬುಲೆನ್ಸ್ ಮತ್ತು ಲಘು ವಾಹನಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದೆವು. ಆದರೆ ಹೆದ್ದಾರಿ ಪ್ರಾಧಿಕಾರ ನಮ್ಮ ಮನವಿಯನ್ನು ಪುರಸ್ಕರಿಸಿರಲಿಲ್ಲ. ಹಾಗಾಗಿ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಕುಲ್ ದೀಪ್ ಜೈನ್ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದರು.