ಬೆಂಗಳೂರು: ಸಿಸಿಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಿನ್ನೆ ರಾತ್ರಿ ನಡೆದಿದ್ದ ರೌಡಿ ಶೀಟರ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಂದ್ ಪಾಷ, ಸಲ್ಮಾನ್, ಸೈಯದ್ ವಾಸಿಂ, ಇಮ್ರಾನ್, ಮುಜಾರ್, ಅಜಮ್ ಬಿನ್ ಬಂಧಿತ ಆರೋಪಿಗಳು. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಸಾಬೂ ಹಾಗೂ ಪ್ರಮಖ ಆರೋಪಿ ಜಾಂದ್ ಪಾಷಗೆ ಅವಲಹಳ್ಳಿ ಬಳಿ ಇರುವ ಜಮೀನಿನ ವಿಚಾರವಾಗಿ ಜಗಳ ನಡೆದಿತ್ತು. ಹೀಗಾಗಿ ಸಾಬೂ ನಿನ್ನೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ನೆಲಕ್ಕುರುಳಿದ ರೌಡಿ ಸಾಬೂನನ್ನು ಬರ್ಬರವಾಗಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಪೊಲೀಸರು ನಗರದಲ್ಲಿ ರಾತ್ರಿ ಕಾರ್ಯಾಚಯರಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ನಗರದ ಕೆಲ ಠಾಣೆಗಳಲ್ಲಿ ಬಂಧಿತ ಆರೋಪಿಗಳ ಮೇಲೆ ಕೊಲೆ, ಕೊಲೆ ಯತ್ನದಂತಹ ಪ್ರಕರಣಗಳು ದಾಖಲಾಗಿವೆ.