ಬೆಂಗಳೂರು : ಅಪ್ರಾಪ್ತರು ಸನ್ಯಾಸತ್ವ ಸ್ವೀಕರಿಸಿ ಮಠದ ಪೀಠಾಧಿಪತಿಯಾಗಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆಯಾ? ಎನ್ನುವುದರ ಕುರಿತು ಪರಿಶೀಲನೆ ನಡೆಸುವ ಅಗತ್ಯತೆ ಇದೆ ಎಂದು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಶಿರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ.ಲತವ್ಯ ಆಚಾರ್ಯ ಸೇರಿದಂತೆ ನಾಲ್ವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಅಪ್ರಾಪ್ತರ ನೇಮಕ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಈ ಅರ್ಜಿಯ ವಿಚಾರಣೆ ನಡಸಿತು. ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪರ ವಕೀಲರು, ಪೀಠಾಧಿಪತಿಯಾಗಿರುವ ಅಪ್ರಾಪ್ತರು ಹಾಗೂ ಅವರ ತಂದೆಯನ್ನು ಆಯೋಗ ಭೇಟಿ ಮಾಡಿ ಸಮಾಲೋಚಿಸಿತು.
ಪುತ್ರ ಪೀಠಾಧಿಪತಿಯಾಗಬೇಕೆಂಬುದು ತಂದೆಯ ಆಸೆಯಾಗಿತ್ತು. ಪೀಠಾಧಿಪತಿಯಾಗಲು ತನಗೆ ಇಷ್ಟವಿತ್ತು. ಅದರಂತೆ ಸನ್ಯಾಸತ್ವ ಸ್ವೀಕರಿಸಿ ಪೀಠಾಪತಿಧಿಯಾಗಲು ಒಪ್ಪಿಗೆ ಸೂಚಿರುವುದಾಗಿ ಅಪ್ರಾಪ್ತ ಪೀಠಾಧಿಪತಿಯು ಆಯೋಗಕ್ಕೆ ತಿಳಿಸಿದರು ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದೇ ವಿಚಾರವನ್ನು ಉಡುಪಿ ಜಿಲ್ಲಾ ಮಕ್ಕಳ ಹಕ್ಕುಗಳ ಸಂರಕ್ಷಣಾ ಘಟಕವೂ ನ್ಯಾಯಪೀಠಕ್ಕೆ ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತಂದಿತು.
ಓದಿ: ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ ನೇಮಕ ಪ್ರಕರಣ : ಸರ್ಕಾರ ಮೂಕ ಪ್ರೇಕ್ಷಕನಾಗಬಾರದೆಂದ ಹೈಕೋರ್ಟ್
ಅಪ್ರಾಪ್ತರ ನೇಮಕ ಬಗ್ಗೆ ವಾದ-ವಿವಾದ ಆಲಿಸಿದ ನ್ಯಾಯಾಲಯವು, ಸನ್ಯಾಸತ್ವ ಸ್ವೀಕರಿಸಲು ಮತ್ತು ಪೀಠಾಧಿಪತಿಯಾಗಲು ಅಪ್ರಾಪ್ತರು ಸಮ್ಮತಿ ಸೂಚಿಸುವುದಕ್ಕೆ ಹಾಗೂ ಅಪ್ರಾಪ್ತ ಪುತ್ರ ಸನ್ಯಾಸತ್ವ ಸ್ವೀಕರಿಸಲು ಪೋಷಕರು ಒಪ್ಪಿಗೆ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ? ಸನ್ಯಾಸತ್ವ ಸ್ವೀಕರಿಸುವುದರ ಪರಿಣಾಮಗಳು ಅಪ್ರಾಪ್ತರಿಗೆ ತಿಳಿದಿರುತ್ತದೆಯೇ? ಎಂದು ಪ್ರಶ್ನಿಸಿತು.
ಈ ಕುರಿತು ಕಾನೂನಿನ ಅಂಶಗಳನ್ನು ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟಿತು. ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಸೋದಿ ವಾದಿರಾಜ ಮಠ ಮತ್ತು ಅದರ ಪೀಠಾಧಿಪತಿಗೆ ಕೊನೆಯ ಅವಕಾಶ ನೀಡಿ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿತು.
ಏನಿದು ಪ್ರಕರಣ? : 16 ವರ್ಷದ ಬಾಲಕನನ್ನು ಶಿರೂರು ಮಠದ ಪೀಠಾಧಿಪತಿ ಸ್ಥಾನಕ್ಕೆ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯು ನೇಮಕ ಮಾಡಿರುವ ಕ್ರಮವನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಅಥವಾ ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕ ಮಾಡುವ ಅಧಿಕಾರ ವಿಶ್ವವಲ್ಲಭ ತೀರ್ಥ ಸ್ವಾಮೀಜಿಗೆ ಇಲ್ಲ ಎಂಬುದಾಗಿ ಘೋಷಿಸಬೇಕು.
ಶಿರೂರು ಮಠದ ವ್ಯವಹಾರಗಳಲ್ಲಿ ಯಾವುದೇ ರೀತಿ ಹಸ್ತಕ್ಷೇಪ ಮಾಡದಂತೆ ಸ್ವಾಮೀಜಿಯನ್ನು ನಿರ್ಬಂಧಿಸಬೇಕು. ಶಿರೂರು ಮಠದ ಪೀಠಾಧಿಪತಿ ಸ್ಥಾನಕ್ಕೆ ನಿಯೋಜನೆಗೊಂಡಿರುವ 16 ವರ್ಷದ ಬಾಲಕನನ್ನು ವಶಕ್ಕೆ ಪಡೆದು, ಆತನ ಯೋಗಕ್ಷೇಮ ನೋಡಿಕೊಳ್ಳಲು ಮತ್ತು ವಿದ್ಯಾಭ್ಯಾಸ ಕೊಡಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶಿಸಬೇಕು ಎನ್ನುವುದು ಅರ್ಜಿದಾರರ ಕೋರಿಕೆಯಾಗಿದೆ.
ಓದಿ: ಶಿರೂರು ಮಠದ 32ನೇ ಪೀಠಾಧಿಪತಿಯಾಗಿ ಶ್ರೀ ವೇದವರ್ಧನ ತೀರ್ಥರಿಗೆ ಪಟ್ಟಾಭಿಷೇಕ