ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ, ಕಾಂಗ್ರೆಸ್ ಪಕ್ಷದಲ್ಲಿ "ಎಸ್.ಬಿ.ಎಂ" ಶಾಸಕರೆಂದು ಗುರುತಿಸಿಕೊಂಡಿರುವ ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು ಹಾಗು ಮುನಿರತ್ನ ಅವರ ನಡೆಯ ಬಗ್ಗೆ ಬಿಜೆಪಿಗೆ ಬಹಳಷ್ಟು ಅನುಮಾನ ಮೂಡಿದೆಯಂತೆ.
ಈ ಶಾಸಕರ ರಾಜೀನಾಮೆ ಗಂಭೀರ ಸ್ವರೂಪದ್ದಾ ಅಥವಾ ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರಾದ ಇವರು ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿದು ರಾಜೀನಾಮೆ ವಾಪಸ್ ಪಡೆಯುತ್ತಾರಾ ಎನ್ನುವ ಅನುಮಾನ ಬಿಜೆಪಿ ನಾಯಕರನ್ನು ಕಾಡತೊಡಗಿದೆ.
ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜು, ಎಸ್.ಟಿ ಸೋಮಶೇಖರ್ ಅತೃಪ್ತರ ಜತೆ ಮುಂಬೈಗೆ ತೆರಳಿದ್ದರಾದರೂ, ಈ ಹಿಂದೆ ಆಪರೇಶನ್ ಕಮಲ ನಡೆದಾಗ ಸಿದ್ದರಾಮಯ್ಯರ ಅವಾಜ್ಗೆ ಸಚಿವ ಎಂಟಿಬಿ ನಾಗರಾಜ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ ಸುಧಾಕರ್, ಹಿಂದಿರುಗಿ ಬಂದಂತೆ ಇವರೂ ಬರುವ ಸಾಧ್ಯತೆಗಳಿವೆಯಾ ಎನ್ನುವ ಸಂದೇಹ ಬಿಜೆಪಿಯಲ್ಲಿದೆ ಎನ್ನಲಾಗ್ತಿದೆ.
ಆರ್ ಆರ್ ನಗರ ಶಾಸಕ ಮುನಿರತ್ನ ಮುಂಬೈಗೆ ತೆರಳದೇ ಬೆಂಗಳೂರಿನಲ್ಲಿ ಉಳಿದುಕೊಂಡಿರುವುದು ಬಿಜೆಪಿಯವರ ಅನುಮಾನವನ್ನ ಮತ್ತಷ್ಟು ಹೆಚ್ಚಿಸಿದೆ. ನಿನ್ನೆ ರಾತ್ರಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಅವರು ಮುನಿರತ್ನ ಜತೆ ಮಾತುಕತೆ ನಡೆಸಿ ಮನವೊಲಿಸುವ ಕಸರತ್ತು ನಡೆಸಿದ್ದಾರೆ.
ಅಂತಿಮವಾಗಿ ಎಸ್.ಬಿ.ಎಂ ಶಾಸಕರ ರಾಜೀನಾಮೆ ಲೆಕ್ಕಕ್ಕೆ ಹಿಡಿದುಕೊಳ್ಳುವುದು ಕಷ್ಟ ಎನ್ನುವ ಅಭಿಪ್ರಾಯವನ್ನು ಬಿಜೆಪಿ ಹೊಂದಿದೆ ಎಂದು ಹೇಳಲಾಗುತ್ತಿದೆ. ಆಪರೇಶನ್ ಕಮಲದ ವಿವರಗಳನ್ನು ತಿಳಿಯಲು ಈ ಶಾಸಕರು ಒಡನಾಟ ಹೊಂದಿದ್ದಾರೆಯೇ ಎನ್ನುವ ಸಂದೇಹವು ಇದೆಯಂತೆ.