ಬೆಂಗಳೂರು: ಅನರ್ಹರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ನೈತಿಕವಾಗಿ ಬೆತ್ತಲಾಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಕಿಡಿ ಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪನವರು ನಮಗೂ ಅತೃಪ್ತರ ರಾಜೀನಾಮೆಗೆ ಸಂಬಂಧವಿಲ್ಲ ಎನ್ನುತ್ತಿದ್ದರು. ಆಪರೇಷನ್ ಕಮಲ ಮಾಡಿಲ್ಲ ಅಂತ ಹೇಳಿದ್ದರು. ಆದರೆ ಈಗ ಅವರು ಮಾಡಿರುವುದೇನು? ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ. ಕೊಟ್ಟ ಭರವಸೆ ಈಡೇರಿಸುತ್ತೇವೆ ಅಂತ ಹೇಳಿದ್ದಾರೆ. ಅನರ್ಹರಿಗೆ ಕೊಟ್ಟ ಭರವಸೆ ಈಡೇರಿಸ್ತಾರಂತೆ. ಯಡಿಯೂರಪ್ಪ ಇಲ್ಲಿಯವರೆಗೆ ಹೇಳಿದ್ದು ಸುಳ್ಳಲ್ವಾ? ಸುಳ್ಳನ್ನ ಹೇಳಿದ್ದಕ್ಕೆ ಸಿಎಂ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಯಡಿಯೂರಪ್ಪ ಮತದಾರರ ಓಲೈಕೆ ಪ್ರಯತ್ನ ಮಾಡಿದ್ದಾರೆ. ಅನರ್ಹರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಭಾಷಾ ಉಲ್ಲಂಘನೆಯನ್ನೂ ಮಾಡಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಕನ್ನಡೇತರ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ. ಶಕ್ತಿಸೌಧದ ವ್ಯಾಪ್ತಿಗೆ ಬರುವ ಶಿವಾಜಿನಗರ ಕ್ಷೇತ್ರದಲ್ಲಿ ಅನ್ಯ ಭಾಷಿಗರಿಗೆ ಟಿಕೆಟ್ ನೀಡುವ ಮೂಲಕ ಕನ್ನಡಿಗರನ್ನು ಅವಮಾನಿಸಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗ ಸುಮೋಟೋ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ರು.
ಆರ್. ಶಂಕರ್ಗೆ ಟಿಕೆಟ್ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ವಿಶ್ವಾಸದ್ರೋಹವೆಸಗಿದ್ದಾರೆ. ರೋಷನ್ ಬೇಗ್, ಶಂಕರ್ಗೆ ದ್ರೋಹ ಎಸಗಿದ್ದಾರೆ. ಇವರ ಒತ್ತಡಕ್ಕೆ ತಾನೇ ಅವರು ರಾಜೀನಾಮೆ ಕೊಟ್ಟಿದ್ದು. ಇಂದು ಅವರನ್ನ ಬೀದಿಪಾಲು ಮಾಡಿದ್ದಾರೆ. ಉಳಿದ 15 ಜನಕ್ಕೂ ಮುಂದೇ ಇದೇ ಸ್ಥಿತಿ ಬರಲಿದೆ. ಅಲ್ಲಿಗೆ ಹೋಗಿರುವ ಎಲ್ಲ ಸ್ನೇಹಿತರಿಗೂ ಇದೇ ಗತಿ ಆಗಲಿದೆ. ಇದಕ್ಕೆ ಹೆಚ್ಚಿನ ದಿನ ಕಾಯಬೇಕಿಲ್ಲ ಎಂದರು.