ಬೆಂಗಳೂರು: ಉತ್ತರಕರ್ನಾಟಕ ಭಾಗದಲ್ಲಿ ಭಾರಿ ಮಳೆ ಹಾಗೂ ನೆರೆ ಸಮಸ್ಯೆ ಉಂಟಾಗಿರುವ ಹಿನ್ನೆಲೆ ಇದರ ವೀಕ್ಷಣೆಗೆ ಕಾಂಗ್ರೆಸ್ ಪಕ್ಷ ಎರಡು ಪ್ರತ್ಯೇಕ ತಂಡವನ್ನು ರಚಿಸಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ನಿಂದ ತಂಡ ರಚನೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎರಡು ತಂಡವನ್ನು ರಚಿಸಿ ಆದೇಶ ಹೊರಡಿಸಿದ್ದು, ತಂಡಗಳು ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಸಂಗ್ರಹಿಸಿ, ಅಭಿಪ್ರಾಯಗಳನ್ನು ಸ್ವೀಕರಿಸಿ ಒಂದು ವರದಿಯನ್ನು ಸಿದ್ಧಪಡಿಸಿ ಕಾಂಗ್ರೆಸ್ ಸಮಿತಿಗೆ ನೀಡಲಿದೆ. ಇದನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯವನ್ನು ಪಕ್ಷ ಮಾಡಲಿದೆ.
ಸಮಿತಿಯಲ್ಲಿ ಯಾರ್ಯಾರು?
ಬೆಳಗಾವಿ ಹಾಗೂ ಕಲಬುರಗಿ ಎರಡು ವಿಭಾಗಗಳನ್ನು ಮಾಡಿ ಪ್ರತ್ಯೇಕ ತಂಡ ರಚಿಸಲಾಗಿದ್ದು, ಬೆಳಗಾವಿ ವಿಭಾಗಕ್ಕೆ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅಧ್ಯಕ್ಷರಾಗಿದ್ದು, ಕಲಬುರ್ಗಿ ವಿಭಾಗಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಧ್ಯಕ್ಷರಾಗಿದ್ದಾರೆ. ಬೆಳಗಾವಿ ವಿಭಾಗದಲ್ಲಿ ಹೆಚ್ ಕೆ ಪಾಟೀಲ್ ನೇತೃತ್ವದ ತಂಡದಲ್ಲಿ, ಮಾಜಿ ಸಚಿವರಾದ ಸತೀಶ ಜಾರಕಿಹೊಳಿ, ಆರ್ ಬಿ ತಿಮ್ಮಾಪುರ್, ಉಮಾಶ್ರೀ, ಶಿವಾನಂದ ಪಾಟೀಲ್ ಹಾಗೂ ಮಾಜಿ ಸಂಸದ ಐ ಜಿ ಸನದಿ ಸದಸ್ಯರಾಗಿದ್ದಾರೆ. ಕಲಬುರ್ಗಿ ವಿಭಾಗದಲ್ಲಿ ಈಶ್ವರ್ ಖಂಡ್ರೆ ನೇತೃತ್ವದ ತಂಡದಲ್ಲಿ, ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎಂ ಎಸ್ ಬೋಸರಾಜ್, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಶಾಸಕರಾದ ಶರಣಬಸಪ್ಪ ದರ್ಶನಾಪೂರ, ಡಾ.ಅಜಯ್ ಸಿಂಗ್ ಹಾಗೂ ಸಂಸದ ನಾಸಿರ್ ಹುಸೇನ್ ಸದಸ್ಯರಾಗಿದ್ದಾರೆ.