ಬೆಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಕಟಿಸಿದ್ದಾರೆ. ಸಮಗ್ರ ಶಿಕ್ಷಣ ಕಚೇರಿಯಲ್ಲಿ ಇಂದು ಮಾತನಾಡಿದ ಸಚಿವರು, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದೇವೆ. 1:1 ಆಧಾರದಲ್ಲಿ ಪಟ್ಟಿ ರಿಲೀಸ್ ಮಾಡಲಾಗಿದೆ. ಎಲ್ಲರ ಆರೋಪಕ್ಕೆ ಇವತ್ತು ಉತ್ತರ ನೀಡಿದ್ದೇವೆ. ಅತ್ಯುತ್ತಮವಾಗಿ ಪರೀಕ್ಷೆ ನಡೆಸಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
15 ಸಾವಿರ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಮಾಡಿದ್ದೆವು. 1:1 ಆಧಾರದಲ್ಲಿ 13,363 ಅಭ್ಯರ್ಥಿಗಳು ಪಟ್ಟಿಯಲ್ಲಿ ಇದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ 5 ಸಾವಿರ ಹುದ್ದೆ ಇಟ್ಟಿದ್ದೇವೆ. ಆದರೆ ಅಲ್ಲಿ ಸ್ವಲ್ಪ ಕೊರತೆ ಆಗಿದೆ. 5 ಸಾವಿರ ಹುದ್ದೆ ಪೈಕಿ 4,187 ಪಟ್ಟಿ ಬಿಡುಗಡೆ ಆಗಿದೆ. ಉಳಿದ ಭಾಗದಲ್ಲಿ 9,176 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.
1,768 ಇಂಗ್ಲಿಷ್ ಅಭ್ಯರ್ಥಿಗಳು, ಗಣಿತ – 5,450, ಸಮಾಜ ವಿಜ್ಞಾನ - 4,521, ಜೀವ ವಿಜ್ಞಾನ - 1,624 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಒಟ್ಟು 15 ಸಾವಿರ ಹುದ್ದೆಗಳಲ್ಲಿ 13,363 ಹುದ್ದೆಗೆ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಶಿಕ್ಷಕರಾಗಿ ತೃತೀಯ ಲಿಂಗಿಗಳು ಆಯ್ಕೆ: ಯಾವುದೇ ರೀತಿಯ ಗೊಂದಲ ಇಲ್ಲದೆ ಇಲಾಖೆ ಪರೀಕ್ಷೆ ಮಾಡಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಮೂವರು ತೃತೀಯ ಲಿಂಗಿಗಳು ಶಿಕ್ಷಕರಾಗಿ ಆಯ್ಕೆ ಆಗಿದ್ದಾರೆ. 10 ತೃತೀಯ ಲಿಂಗಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 3 ಜನ ಆಯ್ಕೆ ಆಗಿದ್ದಾರೆ. 34 ಜನ ಎಂಜಿನಿಯರ್ ಅಭ್ಯರ್ಥಿಗಳ ಪೈಕಿ 19 ಜನ ಎಂಜಿನಿಯರಿಂಗ್ ಅಭ್ಯರ್ಥಿಗಳು ಶಿಕ್ಷಕರಾಗಿ ಆಯ್ಕೆ ಆಗಿದ್ದಾರೆ. 8 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಯಶಸ್ವಿಯಾಗಿ ಮಾಡಿದ್ದೇವೆ. ಫೆಬ್ರವರಿಯಲ್ಲಿ 2,500 ಹೈಸ್ಕೂಲ್ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮಾಡುವುದಾಗಿ ತಿಳಿಸಿದರು.
ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ, ವಿದ್ಯಾರ್ಥಿಗಳು, ಶಿಕ್ಷಕರ ಸ್ನೇಹಿಯಾಗಿ ಭವಿಷ್ಯದ ಶೈಕ್ಷಣಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ನ.14ರಂದು 7,601 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು.
(ಓದಿ: ರಾಮೋಜಿ ಫಿಲ್ಮ್ ಸಿಟಿ ಮುಡಿಗೆ ಮತ್ತೊಂದು ಮುಕುಟ... ಅತ್ಯುತ್ತಮ ಆತಿಥ್ಯ ಪ್ರಶಸ್ತಿಯ ಗರಿ)