ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾದ 3,32,856 ಅಭ್ಯರ್ಥಿಗಳ ಪೈಕಿ 61,927 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ನವೆಂಬರ್ 6ರಂದು ನಡೆದಿತ್ತು.
ಪರೀಕ್ಷೆಯ ಪತ್ರಿಕೆ -1ಕ್ಕೆ 1,40,790 ಅಭ್ಯರ್ಥಿಗಳು ಹಾಜರಾಗಿದ್ದು, 20,070 ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಪತ್ರಿಕೆ -2ಕ್ಕೆ 1,92,066 ಅಭ್ಯರ್ಥಿಗಳು ಹಾಜರಾಗಿದ್ದು, 41,857 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಪತ್ರಿಕೆ -1 ಮತ್ತು ಪತ್ರಿಕೆ -2ರಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 3,32,856 ಅಭ್ಯರ್ಥಿಗಳಲ್ಲಿ 61,927 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಕೀ-ಉತ್ತರಗಳನ್ನು ಆಧರಿಸಿ, ಓಎಂಆರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶಗಳನ್ನು ಲೆಕ್ಕಾಚಾರ ಮಾಡಲಾಗಿದೆದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಬೆಳಗಾವಿ ಗಡಿ ವಿವಾದ: ಸಾಂವಿಧಾನಿಕ ಮಾರ್ಗದ ಮೂಲಕವೇ ಪರಿಹಾರ- ಅಮಿತ್ ಶಾ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಪತ್ರಿಕೆಗಳಲ್ಲಿ ಶೇ.60ರಷ್ಟು ಅರ್ಹತಾ ಅಂಕಗಳು ಹಾಗೂ ಪ.ಜಾತಿ, ಪ.ಪಂಗಡ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶೇ.55ರಷ್ಟು ಅರ್ಹತಾ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸಲಾಗಿದೆ. ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಕ್ಯೂ ಆರ್ ಕೋಡ್ ದತ್ತಾಂಶ ಹೊಂದಿರುವ ಗಣಕೀಕೃತ ಅಂಕ ಪಟ್ಟಿ ವಿತರಿಸಲಾಗುವುದು.
ಕೇಂದ್ರೀಕೃತ ದಾಖಲಾತಿ ಘಟಕದಿಂದ ಈ ಸಂಬಂಧ ಮುದ್ರಿತ ಅಂಕಪಟ್ಟಿಯನ್ನು ವಿತರಿಸುವುದಿಲ್ಲ. ಬದಲಾಗಿ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್ ಮೂಲಕ ಸುರಕ್ಷತಾ ಕೋಡ್ (ಕ್ಯೂಆರ್ ಕೋಡ್) ಹೊಂದಿರುವ ಗಣಕೀಕೃತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: ಆರೋಪಿ ಸೆರೆ