ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಸಂಕಲ್ಪ ತೊಟ್ಟಿರುವ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಿಗೆ ಗೆಲ್ಲಲೇಬೇಕು ಎಂಬ ಗುರಿ ನೀಡಿದೆ ಎಂಬ ಮಾಹಿತಿ ಇದೆ. ವಿಧಾನಸಭೆ ಚುನಾವಣೆಯಲ್ಲಿ ಕಳೆದ ನಾಲ್ಕಾರು ಅವಧಿ ಸ್ಪರ್ಧಿಸಿ ನಿರಂತರವಾಗಿ ಗೆಲ್ಲುತ್ತಾ ಬಂದಿರುವ ಹಿರಿಯ ಶಾಸಕರಿಗೆ ಕಾಂಗ್ರೆಸ್ ರಾಜ್ಯ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆಲ್ಲಲೇಬೇಕೆಂಬ ಗುರಿ ನೀಡಿದ್ದು, ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಇತರ ಪಕ್ಷಗಳ ಪ್ರಭಾವ ಮೆಟ್ಟಿ ನಿಂತು, ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ಗೆಲುವು ಸಾಧಿಸುವ ಗುರಿ ನೀಡಲಾಗಿದೆ.
ರಾಷ್ಟ್ರೀಯ ನಾಯಕರ ಇಚ್ಛೆ ಕೂಡ ಇದೇ ಆಗಿದ್ದು, ಕಾಂಗ್ರೆಸ್ ಪಕ್ಷ ಅವಕಾಶ, ಅಧಿಕಾರ ಇದ್ದ ಸಂದರ್ಭದಲ್ಲಿ ಬೆಂಗಳೂರು ನಗರದ ಶಾಸಕರಿಗೆ ಉತ್ತಮ ಸ್ಥಾನ ಮಾನ ಕಲ್ಪಿಸಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿ ನಿರತವಾಗಿರುವ ಪಕ್ಷಕ್ಕೆ ತಾವು ಬೆಂಬಲವಾಗಿ ನಿಲ್ಲಬೇಕು. ತಾವು ಗೆಲ್ಲುವುದಲ್ಲದೇ ನಗರದಲ್ಲಿ ಇನ್ನಷ್ಟು ಸ್ಥಾನವನ್ನು ಕಾಂಗ್ರೆಸ್ ಗೆದ್ದುಕೊಳ್ಳುವಲ್ಲಿ ಸಹಕರಿಸಬೇಕು. ಈ ಸಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿದೆ. ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದ್ದು, ಪಕ್ಷ ನಿಮ್ಮ ಮೇಲೆ ಇರಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.
ಗೆಲ್ಲಿಸಿಕೊಳ್ಳುವ ಗುರಿ: ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಕ್ಷದ ಜತೆ ಪ್ರಮುಖ ಪಕ್ಷೇತರ ಸದಸ್ಯರು ಸಹ ಈ ಸಾರಿ ಕಾಂಗ್ರೆಸ್ ಗೆಲುವಿಗೆ ತೊಡಕಾಗಲಿದ್ದಾರೆ. ಅಲ್ಲದೇ ಸಾಕಷ್ಟು ಕಡೆ ಹಿರಿಯ ನಾಯಕರಿಗೆ ಸೋಲಾಗುವ ಸಾಧ್ಯತೆ ಇದೆ ಎಂದು ಆಂತರಿಕ ಸಮೀಕ್ಷೆ ತಿಳಿಸಿದೆ. ಆದರೆ, ಪಕ್ಷಕ್ಕೆ ನಿಮ್ಮ ಮೇಲೆ ವಿಶ್ವಾಸ ಇದ್ದು, ಕನಿಷ್ಠ 30 ರಿಂದ 35 ಸಾವಿರ ಮತಗಳ ಅಂತರದ ಗೆಲುವಿಗೆ ಸಜ್ಜಾಗಿ. ಒಂದೊಮ್ಮೆ ಸೋಲಿನ ಭೀತಿ ನಿಮಗಿದ್ದರೆ ಸೂಕ್ತ ಅಭ್ಯರ್ಥಿಯನ್ನು ನೀವೇ ಸೂಚಿಸಿ ಎಂದು ಸಹ ತಿಳಿಸಲಾಗಿದೆ. ಒಟ್ಟಾರೆ ಈ ಸಾರಿ ಹಿರಿಯ ನಾಯಕರು ನಗರದಲ್ಲಿ ಗೆಲ್ಲುವುದು ಮಾತ್ರವಲ್ಲ, ಇತರರಿಗೂ ಮಾದರಿಯಾಗುವಂತೆ ಸೂಚಿಸಲಾಗಿದೆ.
ಯಾರಿಗೆ ಸವಾಲು?: ಈಗಾಗಲೇ ಪಕ್ಷದ ಹಿರಿಯ ಸದಸ್ಯರಾದ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜು ಬಿಜೆಪಿ ಸೇರಿದ್ದಾರೆ. ಗೆಲ್ಲಬಲ್ಲ ಸದಸ್ಯರಾಗಿದ್ದ ಮುನಿರತ್ನ ಸಹ ಬಿಜೆಪಿ ಪಾಳಯದಲ್ಲಿದ್ದಾರೆ. ಮಾಜಿ ಸಚಿವ ರೋಷನ್ ಬೇಗ್ ಕಾಂಗ್ರೆಸ್ ತೊರೆದಿದ್ದು, ಜೆಡಿಎಸ್ನತ್ತ ಮುಖ ಮಾಡುವ ಸಾಧ್ಯತೆ ಇದೆ. ಇವರೆಲ್ಲಾ ಕಾಂಗ್ರೆಸ್ಗೆ ಮರಳುವ ಸಾಧ್ಯತೆ ಕಡಿಮೆ ಇದೆ. ಇದರಿಂದ ಈ ಕ್ಷೇತ್ರಕ್ಕೆ ಬಲವಾದ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಬೇಕಿದೆ. ಅಖಂಡ ಶ್ರೀನಿವಾಸಮೂರ್ತಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲವಾಗಿಯೇ ಉಳಿದಿದೆ.
ರಾಜ್ಯದ ಮಾಜಿ ಗೃಹ ಸಚಿವ ಕೆ ಜೆ ಜಾರ್ಜ್, ಮಾಜಿ ಸಚಿವ ಜಮೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಎನ್.ಎ. ಹ್ಯಾರಿಸ್ ಗೆಲ್ಲುವ ಸಾಮರ್ಥ್ಯ ಉಳಿಸಿಕೊಂಡಿರುವ ನಾಯಕರಾಗಿದ್ದು, ಇವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಆನೆಕಲ್ ಸೇರಿದಂತೆ ಒಟ್ಟು 28 ವಿಧಾನಸಭೆ ಕ್ಷೇತ್ರಗಳ ಪೈಕಿ 12 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ಗೆ 2019ರಲ್ಲಿ ಆಘಾತ ಎದುರಾಗಿತ್ತು. ಆಪರೇಷನ್ ಕಮಲದಿಂದಾಗಿ ಬೆಂಗಳೂರಿನ ನಾಲ್ಕು ಶಾಸಕರು ಕೈಬಿಟ್ಟು ಹೋಗಿದ್ದರು. ಅದರಲ್ಲಿ ಒಂದು ಕ್ಷೇತ್ರ ಮರಳಿ ಪಡೆಯುವಲ್ಲಿ ಕಾಂಗ್ರೆಸ್ ಸಫಲವಾದರೆ, ಉಳಿದ ಮೂರು ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕಾಗಿ ಬಂದಿದೆ.
ಈ ಸಲ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಎಂ. ಕೃಷ್ಣಪ್ಪ, ಕೃಷ್ಣ ಬೈರೇಗೌಡ, ಮಾಜಿ ಶಾಸಕ ಆರ್.ವಿ. ದೇವರಾಜ್, ಶಾಸಕಿ ಸೌಮ್ಯಾ ರೆಡ್ಡಿ ಗೆಲುವಿನ ಆತಂಕ ಎದುರಿಸುತ್ತಿದ್ದಾರೆ. ಇವರಿಗೆ ಬಲ ತುಂಬುವ ಕಾರ್ಯವನ್ನು ಮಾಡುವಂತೆ ಹಾಗೂ ನಗರದಲ್ಲಿ ಹೆಚ್ಚು ಸ್ಥಾನ ಗಳಿಸಿಕೊಡುವಂತೆ ನಗರದಲ್ಲಿಯೇ ಬಹುಕಾಲದಿಂದ ಇದ್ದು ಜನಪ್ರಿಯರಾಗಿರುವ ಜನಪ್ರತಿನಿಧಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ತಮ್ಮ ಕ್ಷೇತ್ರದ ಜತೆ ಇವರಿಗೆ ಇನ್ನಷ್ಟು ಸವಾಲು ಎದುರಾಗಿದೆ.
ಪಕ್ಷ ಅಧಿಕಾರ ಹಿಡಿಯಲಿದೆ: ಕಾಂಗ್ರೆಸ್ ಪಕ್ಷ ಈ ಸಾರಿ 150 ಸ್ಥಾನ ಗೆದ್ದು ಅಧಿಕಾರ ಹಿಡಿಯಲಿದೆ. ಪಕ್ಷಕ್ಕೆ ಜನರ ಬೆಂಬಲ ಸಿಗಲಿದೆ. ಬಿಜೆಪಿಯ 40% ಭ್ರಷ್ಟಾಚಾರ, ಯುವಕರು, ಮಹಿಳೆಯರು, ಅಶಕ್ತರಿಗೆ ಸೌಕರ್ಯ ಕಲ್ಪಿಸದಿರುವುದು, ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯತೆ, ಸುಳ್ಳು ಭರವಸೆ ಹಾಗೂ ಕೋಮು ಭಾವನೆ ಸೃಷ್ಟಿಸಿ ಜನರಲ್ಲಿ ಭಾವನಾತ್ಮಕ ಕೆರಳುವಿಕೆಯನ್ನು ಉಂಟುಮಾಡಿದ್ದು ಜನರಿಗೆ ಇಷ್ಟವಾಗಿಲ್ಲ. ಸರ್ಕಾರವನ್ನು ಕಿತ್ತೊಗೆಯಲು ಜನ ಸಂಕಲ್ಪ ತೊಟ್ಟಿದ್ದಾರೆ. ಕಳೆದ ಸಾರಿಗಿಂತ ಹೆಚ್ಚಿನ ಸ್ಥಾನ ನಾವು ಗೆಲ್ಲುತ್ತೇವೆ. ಕನಿಷ್ಠ 18 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ಬಿಟಿಎಂ ಲೇಔಟ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಲಾಗುತ್ತಿದೆ: ಸಿದ್ದರಾಮಯ್ಯ ವಾಗ್ದಾಳಿ