ಬೆಂಗಳೂರು: ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕಿನಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಸವನಗುಡಿ ಶಾಖೆಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನ ಮ್ಯಾನೇಜರ್ ಶಿವಶಂಕರ್ ನೀಡಿದ ದೂರಿನ ಮೇರೆಗೆ ರಾಜೀವ್, ವೆಂಕಟೇಶ್, ರಾಘವೇಂದ್ರ ಹಾಗೂ ಲಾವಣ್ಯ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ರಾಜೀವ್ ಸಹಾಯದೊಂದಿಗೆ ವೆಂಕಟೇಶ್ ಜೊತೆ ಸೇರಿಕೊಂಡು ಸಿಲ್ವರ್ ಮೇಲೆ ಚಿನ್ನದ ಲೇಪನ ಮಾಡಿ 409 ಗ್ರಾಂ ತೂಕದ ಚಿನ್ನಾಭರಣವನ್ನು ಬ್ಯಾಂಕ್ನಲ್ಲಿ ಅಡವಿಟ್ಟು 6 ಲಕ್ಷ ರೂ. ಸಾಲ ಪಡೆದಿದ್ದರು. ಬಳಿಕ ರಾಜೀವ್, 343 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಇಟ್ಟು ಅದೇ ಬ್ಯಾಂಕ್ನಲ್ಲಿ 6.10 ಲಕ್ಷ ರೂ. ಸಾಲ ಪಡೆದಿದ್ದನಂತೆ.
ಇದನ್ನೂ ಓದಿ : ನಕಲಿ ಚಿನ್ನ ಅಡವಿಟ್ಟು ವಂಚನೆ: ಮೂವರ ಬಂಧನ
ಇಷ್ಟಕ್ಕೆ ನಿಲ್ಲದ ರಾಜೀವ್, ತನ್ನ ತಮ್ಮ ರಾಘವೇಂದ್ರನ ಹೆಸರಿನಲ್ಲಿ 10 ಲಕ್ಷ ರೂ. ಹಾಗೂ ರಾಘವೇಂದ್ರ ಪತ್ನಿ ಲಾವಣ್ಯ ಹೆಸರಿನಲ್ಲಿಯೂ 4.80 ಲಕ್ಷ ಸಾಲ ಪಡೆದಿದ್ದಾರೆ. ಒಟ್ಟು ಸುಮಾರು 30 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಬ್ಯಾಂಕಿಗೆ ಅನುಮಾನ ಬಾರದಿರಲು 21 ಲಕ್ಷ ಹಣ ಪಾವತಿ ಮಾಡಿ 8 ಲಕ್ಷ ಸಾಲ ಬಾಕಿ ಉಳಿಸಿಕೊಂಡು ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.