ಬೆಂಗಳೂರು: ನಗರದಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿ ಹಾಸಿಗೆಗಳನ್ನು ವಶಪಡಿಸಿಕೊಳ್ಳಬೇಕು. ತಪ್ಪು ಮಾಹಿತಿ ನೀಡಿ ಹಾಸಿಗೆಗಳನ್ನು ನೀಡದಿರುವ ಆಸ್ಪತ್ರೆಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಗೃಹ ಸಚಿವರು ಬಸವರಾಜ್ ಬೊಮ್ಮಾಯಿ ಸೂಚಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಆಸ್ಪತ್ರೆಗಳ ಹಾಸಿಗೆ ಹಂಚಿಕೆ ಮತ್ತು ಲಭ್ಯತೆಗೆ ಸಂಬಂಧಿಸಿದಂತೆ ಮಾನ್ಯ ಕಂದಾಯ ಸಚಿವರು ಆರ್.ಅಶೋಕ್, ಮಾನ್ಯ ಗೃಹ ಸಚಿವರು ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವರ್ಚುಯಲ್ ಸಭೆ ನಡೆಯಿತು. ಈ ವೇಳೆ ಮಾತನಾಡಿ, ಆಸ್ಪತ್ರೆಗಳ ಸಹಯೋಗದಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಬೇಕು. ಸ್ಟೆಪ್ ಡೌನ್ ಆಸ್ಪತ್ರೆಯಲ್ಲಿ ಸದ್ಯ 960 ಹಾಸಿಗೆಗಳ ವ್ಯವಸ್ಥೆಯಿದ್ದು, ಅದನ್ನು ಕನಿಷ್ಠ 5,000 ಹಾಸಿಗೆಗಳಿಗೆ ಹೆಚ್ಚಳ ಮಾಡಲು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 20-30 ಹಾಸಿಗೆಗಳ ಆಸ್ಪತ್ರೆಗಳು ಹಾಗೂ 100ಕ್ಕಿಂತ ಹೆಚ್ಚು ಹಾಸಿಗೆಗಳ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳನ್ನು ಪರಿಶೀಲನೆ ನಡೆಸಿ ಶೇ.50 ಹಾಸಿಗೆಗಳನ್ನು ಕೂಡಲೇ ವಶಕ್ಕೆ ಪಡೆದುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡವು ಹಾಸಿಗೆಗಳ ಲಭ್ಯತೆಯ ರಿಯಾಲಿಟಿ ಚೆಕ್ ನಡೆಸಿ ಎಷ್ಟು ಹಾಸಿಗೆಗಳಿವೆ ಎಂಬುದರ ನಿಖರ ಮಾಹಿತಿ ಪಡೆಯಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಖಾಸಗಿ ಆಸ್ಪತ್ರೆಗಳ ಹಾಸಿಗೆ ಹಂಚಿಕೆ ಮತ್ತು ಲಭ್ಯತೆ ಕುರಿತು ನಡೆದ ವರ್ಚುಯಲ್ ಸಭೆಯಲ್ಲಿ ಮುಂದುವರೆದು ಕಂದಾಯ ಸಚಿವರು ಮಾತನಾಡಿ. ನಗರದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಕೂಡಲೆ ಪರಿಶೀಲನೆ ನಡೆಸಿ ಕೋವಿಡ್ ಸೋಂಕಿತರಿಗೆ ಹೆಚ್ಚು ಹಾಸಿಗೆಗಳು ಲಭ್ಯವಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ನೋಡಲ್ ಅಧಿಕಾರಿಗಳು,ಪೊಲೀಸ್ ಅಧಿಕಾರಿಗಳು ಕೂಡಲೆ ಆಸ್ಪತ್ರೆಗಳಿಗೆ ಭೇಟಿ ನಿಡಿ ಪರಿಶೀಲನೆ ನಡೆಸಿ ನಿಯಮಾನುಸಾರ ಹಾಸಿಗೆಗಳನ್ನು ವಶಕ್ಕೆ ಪಡೆದುಕೊಳ್ಳಬೇಕು. ಹಾಸಿಗೆಗಳು ನೀಡದ ಪಕ್ಷದಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕಾನೂನು ರಿತಿಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಗೌರವ್ ಗುಪ್ತಾ ಅವರು ಮಾತನಾಡಿ, ನಗರದಲ್ಲಿರುವ ಕೆಲ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಭೇಟಿ ಪರಿಶೀಲನೆ ನಡೆಸಿ ನಿಯಮಾನುಸಾರ ಹಾಸಿಗೆಗಳನ್ನು ನಿಡದ ಆಸ್ಪತ್ರೆಗಳಿಗೆ ನೋಟೀಸ್ ಜಾರಿಮಾಡಿ ಹಾಸಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. 100ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಆಸ್ಪತ್ರೆಗಳಿಗೆ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಮಾಡಿದ್ದು, ಅದೇ ರೀತಿ ಆಯಾ ವಲಯದಲ್ಲಿ ಬರುವ ಸಣ್ಣ ಆಸ್ಪತ್ರೆಗಳನ್ನು ಮೇಲುಸ್ತುವಾರಿ ಮಾಡಬೇಕು. ಆಸ್ಪತ್ರೆಗಳಿಗೆ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ಆಸ್ಪತ್ರೆಗಳನ್ನು ಸರಿಯಾಗಿ ಪರಿಶೀಲನೆ ನಡೆಸಿದಾಗ ಅವಶ್ಯಕ ಹಾಸಿಗೆಗಳು ಲಭ್ಯವಾಗಲಿವೆ. ಹಾಸಿಗೆ ಕೊಡದ ಆಸ್ಪತ್ರೆಗಳ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಆಸ್ಪತ್ರೆ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರು ಮಾತನಾಡಿ, ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಸಂಬಂಧ ವಲಯವಾರು ಐಎಎಸ್ ಹಾಗೂ ಐಪಿಎಸ್ ನೇತೃತ್ವದ 9 ತಂಡಗಳನ್ನು ನಿಯೋಜಿಸಿದ್ದು, ಪ್ರಮುಖ 50 ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಆಪ್ತಮಿತ್ರ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿದೆ. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 75 ಹಾಸಿಗೆಗಳನ್ನು ಮೀಸಲಿಡಬೇಕಿದ್ದು, ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ನಿಯಮಾನುಸಾರ ಹಾಸಿಗೆಗಳನ್ನು ವಶಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ವೇಳೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತರು ಗೌರವ್ ಗುಪ್ತ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಆಸ್ಪತ್ರೆಗಳ ನೋಡಲ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಓದಿ: ಸೋಂಕಿತ ಮಹಿಳೆಯ ಶವ ಸಾಗಾಟಕ್ಕೆ ಗ್ರಾಮಸ್ಥರ ಹಿಂದೇಟು: ಪಿಪಿಇ ಕಿಟ್ ಧರಿಸಿ ಕೈ ಜೋಡಿಸಿದ ತಹಶೀಲ್ದಾರ್!