ಬೆಂಗಳೂರು: ಸುಸ್ತಿ ಕೃಷಿ ಸಾಲಗಳ ವಸೂಲಾತಿಗೆ ಸಂಬಂಧಿಸಿದಂತೆ ಡಿಸೆಂಬರ್ 27 ರಂದು ಹೊರಡಿಸಿದ್ದ ಆದೇಶದ ಪತ್ರವನ್ನು ತಡೆ ಹಿಡಿದು ಸಹಕಾರ ಸಂಘಗಳ ನಿಬಂಧಕರು ಮರು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಸಾಲ ಮರುಪಾವತಿಯ ಆತಂಕಕ್ಕೆ ಸಿಲುಕಿದ್ದ ರೈತ ನಿಟ್ಟುಸಿರು ಬಿಡುವಂತಾಗಿದೆ.
ಸುಸ್ತಿ ಕೃಷಿ ಸಾಲ ವಸೂಲಿಗೆ ಆದೇಶ ಹೊರಡಿಸುತ್ತಿದ್ದಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದು ಟೀಕಾಪ್ರಹಾರ ನಡೆಸಿದ್ದವು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರೈತ ವಿರೋಧಿ ಎಂದು ತರಾಟೆ ತೆಗೆದುಕೊಂಡಿದ್ದವು. ಎಲ್ಲಾ ಕಡೆ ಸರ್ಕಾರದ ನೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ತನ್ನ ಆದೇಶ ವಾಪಸ್ ಪಡೆದುಕೊಂಡಿದೆ.
ಸರ್ಕಾರವು ಸ್ಪಷ್ಟೀಕರಣ ನೀಡಿದ್ದ ಮೇರೆಗೆ ಸುಸ್ತಿ ಕೃಷಿ ಸಾಲಗಳ ವಸೂಲಾತಿಗೆ ಸಂಬಂಧಿಸಿದಂತೆ ಆವಶ್ಯಕ ಕ್ರಮಗಳನ್ನು ಕೈಗೊಳ್ಳಲು ಕಾರ್ಡ್ ಬ್ಯಾಂಕ್ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿತ್ತು. ಕೂಡಲೇ ಆ ಆದೇಶ ತಡೆಗೆ ಆದೇಶಿಸಿದ್ದರ ಮೇರೆಗೆ ಸಾಲ ವಸೂಲಾತಿಗೆ ಹೊರಡಿಸಿದ್ದ ಆದೇಶ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ.
ಈ ಪತ್ರದ ಅನ್ವಯ ನಿಮ್ಮ ಬ್ಯಾಂಕಿನ ಜಿಲ್ಲಾ ಶಾಖೆಗಳಿಗೆ ಮತ್ತು ಬ್ಯಾಂಕ್‌ಗಳಿಗೆ ಕೂಡಲೇ ತಿಳಿಸಿ ವರದಿ ನೀಡಿ ಎಂದು ಸಹಕಾರ ಸಂಘಗಳ ನಿಬಂಧಕ ಎನ್ ಎಸ್ ಪ್ರಸನ್ನಕುಮಾರ್ ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ.