ಬೆಂಗಳೂರು: ವಿಶಾಲ ಮೈಸೂರು ರಾಜ್ಯ ಕರ್ನಾಟಕ ಎಂಬ ಹೆಸರಿನ ಮೂಲಕ ಅಧಿಕೃತವಾಗಿ ಗುರುತಿಸಿಕೊಂಡು ಇದೀಗ ಭರ್ತಿ 50 ವರ್ಷ. ಈ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್ನಲ್ಲಿ ಹಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಭಾಗಿಯಾದ ಬಳಿಕ ಅವರು ಮಾತನಾಡಿದರು.
ಸಭೆಯ ನಂತರ ಮಾತನಾಡಿದ ಅವರು, ಕರ್ನಾಟಕ ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಪೊಲೀಸ್ ಇಲಾಖೆಗೂ ಸಹ ಕರ್ನಾಟಕ ಪೊಲೀಸ್ ಎಂಬ ನಾಮಕರಣವಾಗಿ 50 ವರ್ಷ ತುಂಬುತ್ತದೆ. ಇದೇ ಸಂಧರ್ಭದಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ ವಿತರಿಸಲಾಗುವುದು. ಹಾಗೂ ರಾಜ್ಯದಲ್ಲಿ ಭವ್ಯವಾದ ಸುಸಜ್ಜಿತ ಸುವರ್ಣ ಪೊಲೀಸ್ ಭವನ ನಿರ್ಮಾಣಕ್ಕಾಗಿ ಬಜೆಟ್ನಲ್ಲಿ ಹಣ ನಿಗಧಿಸಲಾಗುವುದು. ಅಲ್ಲದೇ ಈ ಹಿಂದೆ ತಮ್ಮ ಅಧಿಕಾರವಧಿಯಲ್ಲಿ ರಾಜ್ಯದ ಎಲ್ಲ ಪೊಲೀಸರಿಗೆ ವೈದ್ಯಕೀಯ ವೆಚ್ಚವಾಗಿ ಆರಂಭಿಸಿದ್ದ ಯೋಜನೆಯನ್ನು 1000 ದಿಂದ 1500ಕ್ಕೆ ಹೆಚ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
ನಗರದಲ್ಲಿ ಸೈಬರ್ ಅಪರಾಧಗಳ ತನಿಖೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳುವ ದೃಷ್ಟಿಯಿಂದ ಸಿಇಎನ್ ಠಾಣೆಗಳಲ್ಲಿ ಡಿವೈಎಸ್ಪಿ ಅಥವಾ ಎಸಿಪಿ ಮಟ್ಟದ ಅಧಿಕಾರಿಯನ್ನು ನೇಮಿಸಲಾಗುವುದು. ಅಲ್ಲದೇ ಬೆಂಗಳೂರು ನಗರದಲ್ಲಿ 8 ಅಡಿಷನಲ್ DCP ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಷ್ಟಿ ಮಾಡಲಾಗುವುದು. ಹಾಗೂ ಖಾಲಿ ಇರುವ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ನಾವು ಅಧಿಕಾರಕ್ಕೆ ಬಂದು 8 ತಿಂಗಳು ತುಂಬುತ್ತಿದೆ. ಅಧಿಕಾರಕ್ಕೆ ಬಂದ ನಂತರ ಆರಂಭದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದೆ. ಈ ವೇಳೆ, ನಾವು ಪೊಲೀಸರಿಂದ ಏನು ನಿರೀಕ್ಷಿಸುತ್ತಿದ್ದೇವೆ ಎಂದು ಪ್ರಸ್ತಾಪಿಸಿದ್ದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ರಾಜ್ಯದ ಅಭಿವೃದ್ಧಿಯಾಗುತ್ತದೆ ಅಂತ ಸೂಚಿಸಿದ್ದೆ. ಅಲ್ಲದೇ ಸಮಾಜದ ದುರ್ಬಲ ವರ್ಗ, ಮನೆಗಳಲ್ಲಿ ಒಂಟಿಯಾಗಿ ವಾಸಿಸುವವರಿಗೆ ರಕ್ಷಣೆ ಕೊಡಬೇಕು, ಹಿರಿಯ ಅಧಿಕಾರಿಗಳು ಮೇಲಿಂದ ಮೇಲೆ ಠಾಣೆಗಳಿಗೆ ಭೇಟಿ ನೀಡಬೇಕು, ಕಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದ್ದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಪ್ರಯತ್ನ ಹೆಚ್ಚಿಸಿದೆ. ಹಾಗಾಗಿ ಯಾವುದೇ ಕೋಮುಗಲಭೆಗಳು ನಡೆದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಆಧುನಿಕ ತಂತ್ರಜ್ಞಾನ ಆಧಾರಿತ ಉಪಕರಣಗಳನ್ನ ಬಳಸಿ ಅಪರಾಧಿಗಳಿಗೆ ಶಿಕ್ಷಿಸುವ ಕೆಲಸವಾಗಬೇಕು: ಸಿಎಂ