ಬೆಂಗಳೂರು: ಹಣಕ್ಕಾಗಿ ಆರೋಪಿಯನ್ನು ಅಪಹರಿಸಿ 45 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಪ್ರಕರಣದ ತನಿಖೆ ವೇಗವಾಗಿ ಸಾಗುತ್ತಿದೆ. ಇನ್ನೊಂದೆಡೆ, ತನಿಖೆಯ ಪ್ರಾಥಮಿಕ ವರದಿಯ ಆಧಾರದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಸೇರಿ ನಾಲ್ವರನ್ನು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
ಯಾರೆಲ್ಲಾ ಸಸ್ಪೆಂಡ್?: ಬಾಗಲೂರಿನ ನಿವಾಸಿ ರಾಮಾಂಜನೇಯ ಎಂಬವರನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಮಾರತ್ ಹಳ್ಳಿ ಠಾಣೆಯ ಪಿಎಸ್ಐ ರಂಗೇಶ್, ಹೆಡ್ ಕಾನ್‌ಸ್ಟೇಬಲ್ ಹರೀಶ್, ಮಹದೇವ್ ಹಾಗೂ ಮಹೇಶ್ ಎಂಬುವವರನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರ ಸೂಚನೆ ಮೇರೆಗೆ ಡಿಸಿಪಿ ಕಠಿಣ ಕ್ರಮ ಜರುಗಿಸಿದ್ದಾರೆ.
ಸಂಪೂರ್ಣ ವಿವರ: ಆರೋಪಿ ರಾಮಾಂಜನೇಯ ಹುಲಿ ಚರ್ಮ ಹಾಗೂ ಉಗುರು ಮಾರಾಟಕ್ಕೆ ಯತ್ನಿಸಿದ್ದಾನೆ. ಈತನ ಸಹಚರ ಸಿದ್ದಮಲ್ಲಪ್ಪ ಎಂಬಾತ ಪೊಲೀಸ್ ಬಾತ್ಮೀದಾರರಾಗಿದ್ದ ಶಬ್ಬೀರ್ ಹಾಗೂ ಜಾಕೀರ್ಗೆ ಹುಲಿ ಚರ್ಮ, ಉಗುರು ಮಾರಾಟದ ಬಗ್ಗೆ ಮಾಹಿತಿ ನೀಡಿದ್ದನು. ಈ ಮಾಹಿತಿಯನ್ನು ಶಬೀರ್ ಪಿಎಸ್ಐ ರಂಗೇಶ್ ತಂಡಕ್ಕೆ ನೀಡಿದ್ದಾನೆ. ಅದರಂತೆ ಕಾರ್ಯಾಚರಣೆ ನಡೆಸಿ ರಾಮಾಂಜನೇಯನ ಬಳಿಯಿದ್ದ ಬ್ಯಾಗ್ ಸಮೇತ ಪೊಲೀಸರು ಮಾಲು ವಶಕ್ಕೆ ಪಡೆದುಕೊಂಡಿದ್ದರು. ಪರಿಶೀಲನೆ ನಡೆಸಿದಾಗ ಅದು ನಕಲಿ ಹುಲಿ ಚರ್ಮ ಹಾಗೂ ಉಗುರು ಎಂದು ಕಂಡುಬಂದಿತ್ತು.
ನಕಲಿ ಚರ್ಮ, ಉಗುರು ಎಂದು ತಿಳಿಯುತ್ತಿದ್ದಂತೆ ಕೋಪಗೊಂಡ ಪಿಎಸ್ಐ ರಂಗೇಶ್ ಆರೋಪಿಗಳನ್ನು ಠಾಣೆಗೆ ಕರೆದೊಯ್ಯದೇ ಕಾರಿನಲ್ಲಿಯೇ ಸುತ್ತಾಡಿಸಿದ್ದಾರೆ. ಎರಡು ದಿನಗಳ ಬಳಿಕ ಮಾರತ್ಹಳ್ಳಿ ಠಾಣೆ ಪಕ್ಕದ ಮನೆಯೊಂದರಲ್ಲಿ ಕೂಡಿಹಾಕಿದ್ದಾರೆ. ರಾಮಾಂಜನೇಯ ತಂದೆಗೆ ರಂಗೇಶ್ ಕರೆ ಮಾಡಿ ನಿಮ್ಮ ಮಗನ ವಿರುದ್ಧ ಪ್ರಕರಣ ದಾಖಲಿಸದೇ ಇರಲು 45 ಲಕ್ಷ ರೂ ನೀಡಬೇಕೆಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು. ಮಗನನ್ನು ಅಪಹರಿಸಿದ್ದಾರೆ ಎಂದು ಎಂ ಶಿವರಾಮಯ್ಯ ಬಾಗಲೂರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆಯ ಆರಂಭದಲ್ಲಿ ಅಪಹರಣಕಾರರು ಪೊಲೀಸರೇ ಎಂದು ಗೊತ್ತಾಗಿರಲಿಲ್ಲ. ಆದರೆ ಖಾಕಿ ಕೈವಾಡವಿರುವುದು ಗೊತ್ತಾಗುತ್ತಿದ್ದಂತೆ ಹೆಡ್ಕಾನ್ಸ್ಸ್ಟೇಬಲ್ ಸೇರಿ ಮೂವರನ್ನು ಬಂಧಿಸಲಾಗಿತ್ತು. ಪಿಎಸ್ಐ ರಂಗೇಶ್, ಸಿಬ್ಬಂದಿ ಮಹದೇವ್ ಹಾಗೂ ಮಹೇಶ್ ಸದ್ಯ ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೆ ಬಲೆ ಬೀಸಿರುವ ಬಾಗಲೂರು ಪೊಲೀಸರು ವಿವಿಧ ತಂಡಗಳನ್ನು ರಚಿಸಿ ಶೋಧ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಪಿಎಸ್ಐ, ಹೆಡ್ಕಾನ್ಸ್ಟೇಬಲ್ರಿಂದಲೇ ಆರೋಪಿ ಅಪಹರಿಸಿ ಹಣಕ್ಕೆ ಬೇಡಿಕೆ ಆರೋಪ: ಪೊಲೀಸಪ್ಪ ಸೇರಿ ಮೂವರ ಬಂಧನ
ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಎಚ್ಚರಿಕೆ: ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅವ್ಯವಹಾರದಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವುದು ಖಚಿತ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನಿನ್ನೆ ಪುನರುಚ್ಚರಿಸಿದ್ದಾರೆ. ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಯೇ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಕೂಡಿಟ್ಟು ನಲವತ್ತು ಲಕ್ಷ ರೂ. ಗೆ ಬೇಡಿಕೆಯಿಟ್ಟ ಪ್ರಕರಣ ಸಂಬಂಧ ಇನ್ಫ್ಯಾಂಟ್ರಿ ರಸ್ತೆಯ ತಮ್ಮ ಕಚೇರಿಯಲ್ಲಿ ಮಾತನಾಡಿದ ಆಯುಕ್ತರು ಮತ್ತೊಮ್ಮೆ ಸಿಬ್ಬಂದಿಗೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, "ಬಾಗಲೂರು ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಅಪಹರಿಸಿ ಕೂಡಿ ಹಾಕಿರುವ ಆರೋಪವಿದೆ. ಪ್ರಕರಣದಲ್ಲಿ ಓರ್ವ ಪಿಎಸ್ಐ ಸಹಿತ ಮೂವರು ಸಿಬ್ಬಂದಿ ಕೈವಾಡ ಇರುವುದು ಪತ್ತೆಯಾಗಿದೆ. ಇದುವರೆಗೂ ಮೂವರ ಆರೋಪಿಗಳ ಬಂಧನವಾಗಿದ್ದು, ಪಿಎಸ್ಐ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಕುರಿತು ತನಿಖೆ ಮುಂದುವರೆಸಲಾಗಿದೆ" ಎಂದು ಹೇಳಿದ್ದರು.