ಬೆಂಗಳೂರು: ಕಣ್ಣಿನ ವೈದ್ಯನೋರ್ವನನ್ನು ಉಗ್ರರ ಜೊತೆ ನಂಟು ಹೊಂದಿರುವ ಶಂಕೆ ಹಿನ್ನೆಲೆ ರಾಷ್ಟ್ರೀಯ ತನಿಖಾದಳ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಆರೋಪಿಯನ್ನು ಎನ್ಐಎ ತಂಡ ಬಂಧಿಸಿ ಕರೆದೊಯ್ದಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬಸವನಗುಡಿ ಬಳಿ ಇರುವ ಅಪಾರ್ಟ್ಮೆಂಟ್ವೊಂದರಲ್ಲಿ ಅಬ್ದುರ್ ವಾಸವಿದ್ದ ಬಗ್ಗೆ ಮಾಹಿತಿ ಪಡೆದ ಎನ್ಐಎ, ಬೊಲೆರೋ ವಾಹನದಲ್ಲಿ 11ಜನರ ತಂಡವಾಗಿ ಅಪಾರ್ಟ್ಮೆಂಟ್ ಬಳಿ ಬಂದಿಳಿದಿದ್ದರು. ಅಪಾರ್ಟ್ಮೆಂಟ್ ಒಳಗಿನಿಂದ ಶಂಕಿತ ಉಗ್ರ ಅಬ್ದುರ್ ರೆಹಮಾನ್ಗೆ ಸಂಬಂಧಿಸಿದ ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ದಾಖಲೆಗಳಿರುವ ಎರಡು ಬ್ಯಾಗ್ ಜಪ್ತಿ ಮಾಡಿ ಆತನ ಕೈಗೆ ಕೋಳ ಹಾಕಿ ಹೊರಗಡೆ ಕರೆತರುತ್ತಿರುವುದು ಹಾಗೂ ಉಳಿದ ಅಧಿಕಾರಿಗಳು ಫೈಲ್ ಹಿಡಿದು ಮನೆಯಿಂದ ಹೊರಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಶಂಕಿತ ಉಗ್ರರನ್ನ ಬಲೆಗೆ ಕೆಡವಲು ಹಲವು ತಿಂಗಳಿನಿಂದ ಪ್ಲಾನ್:
ಈ ಹಿಂದೆ ಕಾಶ್ಮೀರ ಮೂಲದ ಜಹಾನಜೈಬ್ ಶಮಿ ವಾನಿ ಹಾಗೂ ಪತ್ನಿ ಹೀನಾ ಬಶೀರ್ ಬೇಗ್ ಬಂಧನವಾಗಿತ್ತು. ಈ ದಂಪತಿ ಐಸಿಸ್ ಗಾಗಿ, ಐಎಸ್ಕೆಪಿ ಸಂಘಟನೆಯನ್ನು ಬೆಳೆಸುತ್ತಿದ್ದರು. ಮಾರ್ಚ್ ತಿಂಗಳಲ್ಲಿ ಇವರನ್ನು ಬಂಧಿಸಿದಾಗ ಅಬ್ದುಲ್ ರೆಹಮಾನ್ ನಂಟು ಬಯಲಾಗಿತ್ತು ಎನ್ನಲಾಗ್ತಿದೆ. ಅಂದಿನಿಂದಲೇ ಶಂಕಿತ ಉಗ್ರ ಅಬ್ದುರ್ ಮೇಲೆ ಐಎನ್ಎ ತಂಡ ಹದ್ದಿನ ಕಣ್ಣಿಟ್ಟು, ಕಳೆದ ಕೆಲವು ತಿಂಗಳಿಂದ ರಾಷ್ಟ್ರೀಯ ತನಿಖಾ ದಳದಿಂದ ಬಸವನಗುಡಿಯಲ್ಲಿ ಓಡಾಡಿ ಆತನ ಚಲನವಲನಗಳನ್ನು ಗಮನಿಸಿದ್ದರು.
ಮೂರು ದಿನಗಳ ಹಿಂದೆ ಅಕ್ಕಪಕ್ಕದ ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯ ಕಲೆಹಾಕಿ ಶಂಕಿತ ಉಗ್ರನ ಕುರಿತು ಪಿನ್ ಟು ಪಿನ್ ಮಾಹಿತಿ ಕಲೆಹಾಕಿ ಕಾರ್ಯಾಚರಣೆಗೆ ಇಳಿದ ತಂಡ, ಆತ ಮನೆಯಲ್ಲಿರುವುದನ್ನು ಖಚಿತ ಪಡಿಸಿಕೊಂಡು ಐಬಿ ಮತ್ತು ಕರ್ನಾಟಕದ ಐಎಸ್ಡಿ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.