ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಫುಲ್ ರಿಲ್ಯಾಕ್ಸ್ ಆಗಿದ್ದಾರೆ. ಕಳೆದ ಕೆಲದಿನಗಳಿಂದ ಅನರ್ಹ ಶಾಸಕರ ಒತ್ತಡಕ್ಕೆ ಹೈರಾಣಾಗಿದ್ದ ಸಿಎಂಗೆ ಇಂದಿನ ತೀರ್ಪಿನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಉಪಚುನಾವಣೆಗೆ ಸುಪ್ರೀಂಕೋರ್ಟ್ನಿಂದ ತಡೆ ಬರುತ್ತಿದ್ದಂತೆ ಒತ್ತಡದಲ್ಲಿದ್ದ ಸಿಎಂ ಬಿಎಸ್ವೈ ರಿಲೀಫ್ ಆಗಿದ್ದಾರೆ. ಸುಪ್ರೀಂಕೋರ್ಟ್ ವಿಚಾರಣೆಯಿಂದ ಎರಡು ಮೂರು ದಿನಗಳಿಂದಲೂ ಬಹಳ ಟೆನ್ಷನ್ನಲ್ಲಿದ್ದ ಸಿಎಂ ವಿಚಾರಣೆ ನಂತರ ವ್ಯತಿರಿಕ್ತ ತೀರ್ಪು ಬಂದರೆ ಏನು ಮಾಡೋದು ಎಂದು ಚಿಂತೆಯಲ್ಲಿದ್ದರು. ಇದೀಗ ಆ ಎಲ್ಲಾ ಚಿಂತೆಗಳಿಂದ ಇದೀಗ ದೂರವಾಗಿದ್ದಾರೆ.
ಗೃಹ ಕಚೇರಿ ಕೃಷ್ಣಾದಿಂದ ನೇರವಾಗಿ ಡಾಲರ್ಸ್ ಕಾಲೋನಿ ನಿವಾಸಕ್ಕೆ ಬಂದು ಮನೆಯಲ್ಲಿ ಟಿವಿ ನೋಡುತ್ತಿದ್ದ ಸಿಎಂ ಟೆನ್ಷನ್ನಲ್ಲೇ ಮಾಧ್ಯಮಗಳಲ್ಲಿ ಬರುತ್ತಿದ್ದ ಅರ್ಜಿ ವಿಚಾರಣೆ ಕುರಿತ ವರದಿ ನೋಡುತ್ತಿದ್ದರು. ಅಂತಿಮವಾಗಿ ಸುಪ್ರೀಂಕೋರ್ಟ್ನಿಂದ ಆದೇಶ ಹೊರಬರ್ತಿದ್ದ ಹಾಗೆ ನೆಮ್ಮದಿಯಿಂದ ಕುಳಿತರು.
ಇಷ್ಟು ದಿನ ಚುನಾವಣೆ ಸಲುವಾಗಿಯೇ ನಿತ್ಯ ಯೋಚನೆಯಲ್ಲೇ ಇದ್ದ ಸಿಎಂ ಬಿಎಸ್ವೈ ಒಂದು ಕಡೆ ತೀರ್ಪು ಏನು ಬರುತ್ತೋ, ಮತ್ತೆ ಅನರ್ಹರಿಗೆ ಟಿಕೆಟ್ ಕೊಟ್ಟು ಚುನಾವಣೆಯಲ್ಲಿ ಸ್ಪರ್ಧೆ ಮಾಡಿಸೋದಾ ಅಥವಾ ಇವರಿಂದ ಪಕ್ಷದಲ್ಲಿ ಉಂಟಾಗಿರುವ ಬಂಡಾಯ ಶಮನ ಮಾಡೋದಾ ಎಂಬ ಚಿಂತೆಯಲ್ಲಿದ್ದರು. ಆದರೆ ಇದೀಗ ಈ ಎಲ್ಲಾ ಚಿಂತೆಗಳಿಂದ ದೂರ ಆದ ಸಿಎಂ ಯಡಿಯೂರಪ್ಪ ಸದ್ಯಕ್ಕೆ ಡಾಲರ್ಸ್ ಕಾಲೋನಿಯಲ್ಲಿ ರಿಲ್ಯಾಕ್ಸ್ ಆಗಿ ಕಾಲ ಕಳೆಯುತ್ತಿದ್ದಾರೆ.