ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಭಾನುವಾರದ ಲಾಕ್ ಡೌನ್ ಹೇರಲಾಗಿತ್ತು. ಆದರೆ ಇಂದಿನ ಭಾನುವಾರದಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಸ್ತಬ್ಧವಾಗಿದ್ದ ಸಿಟಿ ಫುಲ್ ಆ್ಯಕ್ಟಿವ್ ಆಗಿದ್ದು, ವಾಹನ ಓಡಾಟ ಬೆಳಗ್ಗೆಯಿಂದಲೇ ಶುರುವಾಗಿದೆ.
ರಸ್ತೆಗಳಿಗೆ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ತೆಗೆದಿದ್ದು, ವಾಹನ ಸವಾರರಿಗೆ ಮುಕ್ತವಾಗಿ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವು ಪಾರ್ಕ್ಗಳಲ್ಲಿ ವಾಕಿಂಗ್ ಮಾಡಲು ಮುಕ್ತ ಆವಕಾಶ ಕಲ್ಪಿಸಲಾಗಿದೆ. ವಾಕ್ ಮಾಡಲು ಬರುವವರೆಗೆ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿ ನಂತರ ಬಿಡಲಾಗುತ್ತಿದೆ.
ಮತ್ತೊಂದೆಡೆ ಆಟೋ, ಟ್ಯಾಕ್ಸಿ, ಬೈಕ್, ಬಿಎಂಟಿಸಿ ಬಸ್ಸುಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಭಾನುವಾರದ ಲಾಕ್‌ಡೌನ್ ಸಡಿಲಿಕೆ ಮಾಡಿದರು ಕೂಡ ಮೆಜೆಸ್ಟಿಕ್, ಮಲ್ಲೇಶ್ವರಂ ಸುತ್ತಮುತ್ತ ಅಷ್ಟೊಂದು ಜನ ಸಂಚಾರ ಕಂಡುಬರುತ್ತಿಲ್ಲ.
ಇಷ್ಟು ದಿನ ಬ್ಯಾರಿಕೇಡ್ ಭದ್ರತೆಯಲ್ಲಿ ನಿರತರಾಗಿದ್ದ ಪೊಲೀಸರು ಇಂದಿನಿಂದ ಮತ್ತೆ ದೈಹಿಕ ಅಂತರ ಕಾಯ್ದುಕೊಳ್ಳದವರ ಹಾಗೂ ಮಾಸ್ಕ್ ಹಾಕದವರ ಮೇಲೆ ದಂಡ ವಿಧಿಸಲು ಮುಂದಾಗಿದ್ದಾರೆ.