ಬೆಂಗಳೂರು: ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಉದ್ಯಮಿಯನ್ನು ಅಪಹರಿಸಿದ್ದ 7 ಮಂದಿ ಅಪಹರಣಕಾರರನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಅಪಹರಣ ಪ್ರಕರಣದಲ್ಲಿ ಮಹೇಶ್, ಮೋಹನ್, ನವ್ಯಂತ್, ಜೋಸೆಫ್, ರವಿಕಿರಣ್ ಹಾಗೂ ರಾಜು ಸೇರಿದಂತೆ ಏಳು ಆರೋಪಿಗಳನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಕಾರು ಸೇರಿದಂತೆ ಇನ್ನಿತರ ವಾಹನಗಳಿಗೆ ಸಾಲ ಕೊಡುತ್ತಿದ್ದ ವ್ಯವಹಾರ ನಡೆಸುತ್ತಿದ್ದ ನವೀನ್ ಎಂಬಾತ ಅಪಹರಣಕ್ಕೆ ಒಳಗಾಗಿ ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ತಿಲಕ್ ನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.
ಸೆ. 24ರಂದು ತಿಲಕ್ ನಗರದ ಸ್ವಾಗತ್ ರೋಡ್ನಿಂದ ದೇವರಚಿಕ್ಕನಹಳ್ಳಿ ಕಡೆಗೆ ಕ್ಯಾಬ್ನಲ್ಲಿ ಹೋಗುವಾಗ ನವೀನ್ನನ್ನು ಅಪಹರಣಕಾರರ ಗುಂಪು ಸ್ಕೋಡಾ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿತ್ತು. ಬಳಿಕ ನಾಗಮಂಗಲ ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಅಲ್ಲಿಂದ ನವೀನ್ ತಪ್ಪಿಸಿಕೊಂಡು ಬಂದು ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನವೀನ್ ಹಾಗೂ ಆರೋಪಿಗಳ ನಡುವೆ ಸಾಲ ನೀಡುವ ವಿಚಾರಕ್ಕಾಗಿ ಕಲಹ ಏರ್ಪಟ್ಟಿತ್ತು. ಹಲವು ಬಾರಿ ಜಗಳವಾಗಿತ್ತು. ಸದ್ಯ ಅಪಹರಣ ಪ್ರಕರಣದಲ್ಲಿ ಡಿಎಸ್ಎಸ್ ಸಂಘಟನೆ ಅಧ್ಯಕ್ಷ ಪಿ.ಮೂರ್ತಿ ಕಿಂಗ್ಪಿನ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಅಪಹರಣ ಪ್ರಕರಣದಲ್ಲಿ ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಹೆಸರು ಉಲ್ಲೇಖವಾಗಿದೆ. ಸದ್ಯ ಸುನಾಮಿ ಕಿಟ್ಟಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಈ ಹಿಂದೆಯೂ ಜಾನ್ಞ ಭಾರತಿ ಪೊಲೀಸರಿಂದ ಅಪಹರಣ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಬಂಧಿತನಾಗಿದ್ದ.