ಬೆಂಗಳೂರು: ಸತತ ಎರಡು ವರ್ಷಗಳ ಕೋವಿಡ್ನಿಂದ ಕುಂಠಿತವಾದ ಶೈಕ್ಷಣಿಕ ವರ್ಷವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಬೇಸಿಗೆ ರಜೆಯನ್ನು ಕಡಿತಗೊಳಿಸಿ, 2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆ ಆಯುಕ್ತರು, ಮುಂಬರುವ ಶೈಕ್ಷಣಿಕ ವರ್ಷ 2022-23 ರಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷ 2021-22ವನ್ನು 09-04-2022 ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಜೊತೆಗೆ 2021-22ನೇ ಸಾಲಿನ ಬೇಸಿಗೆ ರಜೆಯನ್ನು 10-04-2022 ರಿಂದ 15-05 2022 ರವರೆಗೆ ನೀಡಲು ಆದೇಶಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷವನ್ನು 16-05-2022 ರಿಂದ ಪ್ರಾರಂಭಿಸಲ ನಿರ್ದೇಶನ ನೀಡಲಾಗಿದೆ.
ಸಾಮಾನ್ಯವಾಗಿ ಬೇಸಿಗೆ ರಜೆ ಏಪ್ರಿಲ್ ಮೊದಲ ವಾರದಿಂದ ಪ್ರಾರಂಭವಾಗಿ ಮೇ ಅಂತ್ಯದವರೆಗೆ ಇರುತ್ತದೆ. ಜೂನ್ ಮೊದಲ ವಾರದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿನ ಬೇಸಿಗೆ ರಜೆಯನ್ನು 36 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಈ ಬಾರಿ ಹೊಸ ಶೈಕ್ಷಣಿಕ ವರ್ಷ ಮೇ 16 ರಿಂದ ಪ್ರಾರಂಭವಾಗಲಿದೆ. ಆ ಮೂಲಕ ಕಳೆದ ಎರಡು ವರ್ಷದಿಂದ ಕೋವಿಡ್ನಿಂದ ಕುಂಠಿತವಾದ ಶೈಕ್ಷಣಿಕ ವರ್ಷವನ್ನು ಸರಿದೂಗಿಸಲು ಮುಂದಾಗಿದೆ.
ಇದನ್ನೂ ಓದಿ: ಬೊಮ್ಮಾಯಿ ಚೊಚ್ಚಲ ಬಜೆಟ್ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ಖಚಿತ: ಸಿಎಂ ಲೆಕ್ಕಾಚಾರ ಹೇಗಿದೆ?
ಕಳೆದ ಎರಡು ಶೈಕ್ಷಣಿಕ ವರ್ಷಗಳಿಂದ ಕೋವಿಡ್-19 ರ ಹಿನ್ನೆಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ನಿರಂತರವಾಗಿ ತರಗತಿಗಳನ್ನು ಆನ್‌ಲೈನ್ ಮೂಲಕ ನಡೆಸಲಾಗಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದು, ಪರೀಕ್ಷೆಗಳನ್ನು ಸಹ ನಿರ್ವಹಿಸದೆ, ಕೇವಲ ಮೌಲ್ಯಾಂಕಗಳನ್ನು ವಿಶ್ಲೇಷಣೆ ಮಾಡಿ ಮುಂದಿನ ತರಗತಿಗಳಿಗೆ ಉತ್ತೀರ್ಣ ಮಾಡಿರುವುದರಿಂದ, ವಾಸ್ತವವಾಗಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿರುವುದು ಕಂಡುಬಂದಿದೆ. ಈ ಕಲಿಕಾ ಹಿನ್ನಡೆಯನ್ನು, ಕಲಿಕಾ ಕೊರತೆಯನ್ನು (Learning loss) ಸರಿದೂಗಿಸಲು 'ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಪ್ರಸ್ತುತ ಶೈಕ್ಷಣಿಕ ವರ್ಷ 9-04-2022 ಮುಕ್ತಾಯಗೊಳ್ಳಲಿದ್ದು, 1-9ನೇ ತರಗತಿ ವರೆಗಿನ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
1-5, 1-7/8ನೇ ತರಗತಿಗಳಿರುವ ಪ್ರಾಥಮಿಕ ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆ ಮಾ. 24ರಿಂದ ಏ.4ರ ವರೆಗೆ ನಡೆಯಲಿದೆ. ಅದರ ಫಲಿತಾಂಶ ಏ.9ರಂದು ಪ್ರಕಟವಾಗಲಿದೆ.
8-9ನೇ ತರಗತಿಗಳಿರುವ ಪ್ರೌಢ ಶಾಲೆಗಳಲ್ಲಿ ಮಾ.23ರಿಂದ ಮಾ.26ರ ವರೆಗೆ ವಿಷಯವಾರು ಪರೀಕ್ಷೆ, ಮಾ.29ರಂದು ದೈಹಿಕ ಶಿಕ್ಷಣ ಹಾಗೂ ಇತರೆ ಪರೀಕ್ಷೆ ನಡೆಯಲಿದೆ. ಇದರ ಫಲಿತಾಂಶ ಏ.7ಕ್ಕೆ ಘೋಷಣೆಯಾಗಲಿದೆ.