ಬೆಂಗಳೂರು/ಆಂಧ್ರಪ್ರದೇಶ: ಶ್ರೀಮಂತ ದೇವಸ್ಥಾನವೆಂದು ಕರೆಸಿಕೊಂಡಿರುವ ತಿರುಪತಿ ವೆಂಕಟೇಶ್ವರ ದೇವರಿಗೆ ಭಕ್ತರು ಚಿನ್ನ, ವಜ್ರದ ಆಭರಣಗಳನ್ನು ದೇಣಿಗೆ ರೂಪದಲ್ಲಿ ನೀಡುವುದು ಸಾಮಾನ್ಯ. ಇದೀಗ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ ಸುಮಾರು 42 ಲಕ್ಷ ವೆಚ್ಚದ ಧರ್ಮರಥ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಧರ್ಮರಥವು ತಿರುಪತಿಯ ಸುತ್ತಮುತ್ತ ಹಳ್ಳಿ ಪ್ರದೇಶಗಳಿಗೆ ಪ್ರವೇಶ ಮಾಡುವ ಮೂಲಕ ಭಕ್ತರಿಗೆ ಶ್ರೀನಿವಾಸನ ದರ್ಶನ ನೀಡಲಿದೆ.
ಪ್ರವಾಹ, ಮಳೆಹಾನಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸುಧಾಮೂರ್ತಿ ಅವರು ಕರುನಾಡಿನ ಜನರಿಗೆ ನೆರವಾಗಿದ್ದಾರೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಕಳಕಳಿಯ ಕಾರ್ಯದಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತೀಯ ಸೇನೆಗೂ ಕೂಡ ನೂರಾರು ಕೋಟಿ ರೂಪಾಯಿ ನೆರವು ನೀಡುವ ಕಾರ್ಯವನ್ನು ಸುಧಾಮೂರ್ತಿ ಅವರು ಮಾಡಿದ್ದಾರೆ. ಅವರು ತಿರುಪತಿ ದೇವಸ್ಥಾನಕ್ಕೆ ಹಲವು ವರ್ಷಗಳಿಂದಲೂ ಆಗಾಗ ಭೇಟಿ ನೀಡುತ್ತಿರುತ್ತಾರೆ.
ಇದೀಗ ದೇವಸ್ಥಾನಕ್ಕೆ ಸುಮಾರು 42 ಲಕ್ಷ ವೆಚ್ಚದ ಧರ್ಮರಥ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸುಧಾಮೂರ್ತಿ ಅವರ ಸಹೋದರಿ, ಗಾಳಿಪಟ ಸಿನಿಮಾ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ಸ್ನೇಹಿತರು, ಬಂಧು ಮಿತ್ರರು ಹಾಜರಿದ್ದರು. ಸುಧಾಮೂರ್ತಿ ಅವರ ಧಾರ್ಮಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: 10 ತಿಂಗಳ ಹೆಣ್ಣು ಮಗುವಿಗೆ ಭಾರತೀಯ ರೈಲ್ವೇ ಇಲಾಖೆಯಲ್ಲಿ ಕೆಲಸ!