ಬೆಂಗಳೂರು : ಕೊರೊನಾ ಹಾಗೂ ಮಳೆಯ ಆತಂಕದ ನಡುವೆ ಇಂದಿನಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಆರಂಭವಾಗಿದೆ. ಮೊದಲ ದಿನದ ಪರೀಕ್ಷೆ ಯಾವುದೇ ವಿಘ್ನವಿಲ್ಲದೆ ಮುಕ್ತಾಯವಾಗಿದೆ. ಆತಂಕದಿಂದಲೇ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಮೊದಲ ಪರೀಕ್ಷೆ ಮುಗಿಸಿ ನಿರಾಳರಾಗಿದ್ದಾರೆ. ಕೊರೊನಾ ಸೋಂಕಿದ್ದ ಆರು ಮಂದಿ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆದಿದ್ದಾರೆ.
ಒಟ್ಟು 772 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಇಂದು ರಾಜ್ಯಾದ್ಯಂತ ಸುಮಾರು 2 ಲಕ್ಷ 13 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 18,075 ವಿದ್ಯಾರ್ಥಿಗಳು ಜುಲೈನಲ್ಲಿ ಕೋವಿಡ್ ಭಯದಿಂದಾಗಿ ಪರೀಕ್ಷೆ ಬರೆದಿರಲಿಲ್ಲ. ಹೀಗಾಗಿ, ಇಂತಹ ವಿದ್ಯಾರ್ಥಿಗಳನ್ನು ಈ ಪರೀಕ್ಷೆಯಲ್ಲಿ ಫ್ರೆಶ್ ವಿದ್ಯಾರ್ಥಿಗಳು ಅಂತಾ ಗಣನೆಗೆ ತೆಗೆದುಕೊಳ್ಳಲಾಗಿತ್ತು.
ಎಲ್ಲಾ ಪರೀಕ್ಷಾ ಕೇಂದ್ರದಲ್ಲೂ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯ್ತು. ಸ್ಯಾನಿಟೈಸರ್ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಯ್ತು. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ಹಾಕಿ ಪರೀಕ್ಷೆ ಮುಗಿದ ನಂತರವೂ ಸಾಮಾಜಿಕ ಅಂತರದಲ್ಲಿ ವಿದ್ಯಾರ್ಥಿಗಳನ್ನ ವಾಪಸ್ ಕಳಿಸಲಾಯ್ತು.
ಈ ಬಾರಿ ಸುಮಾರು 11 ಪಾಸಿಟಿವ್ ವಿದ್ಯಾರ್ಥಿಗಳು ರಾಜ್ಯಾದ್ಯಂತ ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ ಆರು ಮಂದಿ ಇಂದು ರಾಜ್ಯದ ವಿವಿಧ ಕೋವಿಡ್ ಸೆಂಟರ್‌ಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ಪಾಸಿಟಿವ್ ವಿದ್ಯಾರ್ಥಿಗಳಿಗೆ ಸಿಸಿಸಿಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಸೆ. 28ವರೆಗೆ ಪರೀಕ್ಷೆ ಇದ್ದು ಮುಂಜಾಗ್ರತಾ ಕ್ರಮದಿಂದಲೇ ಶಿಕ್ಷಣ ಇಲಾಖೆ ಪರೀಕ್ಷೆ ಮುಕ್ತಾಯಗೊಳಿಸಬೇಕಿದೆ.