ಬೆಂಗಳೂರು: ಕಳೆದ ತಿಂಗಳು ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ, 23 ಕೋಟಿ ರೂ. ಖರ್ಚು ಮಾಡಿ ನಿರ್ಮಾಣ ಮಾಡಿದ್ದ ರಸ್ತೆ ಕಳಪೆ ಕಾಮಗಾರಿ ಹಿನ್ನೆಲೆ ಇಬ್ಬರು ಇಂಜಿನಿಯರ್ಗಳನ್ನು ಬಿಬಿಎಂಪಿ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಮಾಧ್ಯಮಗಳಲ್ಲಿ ಬಂದ ವರದಿಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಇಂಜಿನಿಯರ್ಗಳಿಗೆ ನೋಟೀಸ್ ನೀಡಿದ್ದು, ಬಿಬಿಎಂಪಿ ಹಿರಿಯ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದರು. ಪ್ರಧಾನಿ ಕಚೇರಿಯಿಂದಲೂ ವರದಿ ಕೇಳಿದ್ದ ಹಿನ್ನಲೆ ಸ್ಥಳಕ್ಕೆ ಹೋಗಿ ಗುಣಮಟ್ಟ ಪರಿಶೀಲನೆ ಕೂಡಾ ಮಾಡಲಾಗಿತ್ತು. 40 ಎಂ.ಎಂ ಡಾಂಬರೀಕರಣ ಮಾಡಬೇಕಿದ್ದ ಜಾಗದಲ್ಲಿ, 30 ಎಂ.ಎಂ ರಸ್ತೆ ಡಾಂಬರೀಕರಣ ಮಾಡಿದ್ದು ತನಿಖೆ ವೇಳೆ ಬಯಲಾಗಿತ್ತು.
ತನಿಖಾ ವರದಿ ಆಧರಿಸಿ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಎ.ರವಿ ಹಾಗೂ ಸಹಾಯಕ ಅಭಿಯಂತರ ವಿಶ್ವಾಸ್ ಐ.ಕೆ ಅವರನ್ನು ಸೇವೆಯಿಂದ ಅಮಾನತು ಮಾಡಿ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.