ಬೆಂಗಳೂರು: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಹನಿ ನೀರಾವರಿಗಾಗಿ ಸಹಾಯಧನ ಪಡೆದುಕೊಳ್ಳಲು ಯೋಜನೆ ರೂಪಿಸಲಾಗಿದೆ.
ಅದಕ್ಕಾಗಿ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಸಾಮಾನ್ಯ ವರ್ಗದ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಈ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
ತೋಟಗಾರಿಕೆ ಬೆಳೆಗಾರರಿಗೆ ಹನಿ ನೀರಾವರಿ ಘಟಕ ಅಳವಡಿಕೆಗೆ ಸಹಾಯಧನ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಾದ, ಹಣ್ಣು, ತರಕಾರಿ, ಹೂವು, ಪ್ಲಾಂಟೇಶನ್ ಬೆಳೆಗಳು, ಔಷಧಿ, ಸುಗಂಧ ಸಸ್ಯಗಳು ಹಾಗೂ ಸಾಂಬಾರು ಪದಾರ್ಥ ಬೆಳೆಗಳಿಗೆ ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಸಹಾಯಧನವನ್ನು ನೀಡಲಾಗುತ್ತಿದೆ.
ಕೃಷಿಗೆ ಪ್ರೋತ್ಸಾಹ, ನೀರಾವರಿಯನ್ನು ಗಮನದಲ್ಲಿರಿಸಿಕೊಂಡು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಎಲ್ಲಾ ಭೂಮಿಗಳಿಗೂ ನೀರಾವರಿ ಸೌಲಭ್ಯ ಒದಗಿಸುವುದಕ್ಕಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಮಾನದಂಡವೇನು? : ಈ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆಯಲು ರೈತರು ಕೆಲವೊಂದು ಮಾನದಂಡಗಳನ್ನು ಹೊಂದಿರಬೇಕು. ತಮ್ಮದೇ ಹೆಸರಿನಲ್ಲಿ ರೈತರು ಜಮೀನನ್ನು ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಯ ರೈತರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು.
ರೈತರು ಅರ್ಜಿಯನ್ನು ಸಲ್ಲಿಸಿ ಅದು ಅನುಮೋದನೆಯಾದ ನಂತರ ರೈತರು ತೋಟಗಾರಿಕೆ ಇಲಾಖೆ ವತಿಯಿಂದ ಅನುಮೋದನೆಗೊಂಡ ಕಂಪನಿ/ಡೀಲರ್ ಅವರಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬಹುದು.
ಯೋಜನೆಯ ಲಾಭ ಯಾರಿಗೆ? : ಈ ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಬೇರೆ ಬೇರೆ ಸೌಲಭ್ಯಗಳಿವೆ. ಹನಿ ನೀರಾವರಿ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಹನಿ ನೀರಾವರಿ ಘಟಕ ನಿರ್ಮಾಣ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸುವ ರೈತರಿಗೆ ಆಯಾ ಬೆಳೆಗಳು ಮತ್ತು ಬೆಳೆಗಳ ಅಂತರಕ್ಕನುಗುಣವಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಪ್ರಥಮ 2 ಹೆಕ್ಟೇರ್ಗೆ ಮಾರ್ಗಸೂಚಿಯನ್ವಯ ನಿಗದಿಪಡಿಸಿರುವ ವೆಚ್ಚದ ಶೇ.90 ರಷ್ಟು ಸಹಾಯಧನವನ್ನು ಹಾಗೂ ಇತರೆ ವರ್ಗದ ರೈತರಿಗೆ ಶೇ.75ರಷ್ಟು ಸಹಾಯಧನವನ್ನು ನೀಡಲಾಗುವುದು.
2 ಹೆಕ್ಟೇರ್ಗೆ ಮೇಲ್ಪಟ್ಟು 5 ಹೆಕ್ಟೇರ್ ವರೆಗೆ ಶೇ. 45ರಷ್ಟು ಸಹಾಯಧನವನ್ನು ನೀಡಲಾಗುವುದು (ತರಕಾರಿ ಹಾಗೂ ವಾಣಿಜ್ಯ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ವರೆಗೆ ಸಹಾಯಧನವನ್ನು ನೀಡಲಾಗುವುದು). ಈ ಸೌಲಭ್ಯವನ್ನು ಪ್ರತಿ ಫಲಾನುಭವಿಗೆ 5 ಹೆಕ್ಟೇರ್ ಪ್ರದೇಶದವರೆಗೆ ಮಿತಿಗೊಳಿಸಲಾಗಿದೆ.
ತೋಟಗಾರಿಕೆಯಲ್ಲಿ ಕೃಷಿ ಮಾಡುತ್ತಿರುವ ಹಾಗೂ ನೀರಾವರಿ ಮೂಲ ಹೊಂದಿರುವ ರೈತರು ತಮ್ಮ ಜಮೀನಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಆಸಕ್ತಿ ಇದ್ದಲ್ಲಿ ತಮ್ಮ ಜಮೀನು ವ್ಯಾಪ್ತಿಯ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಕಚೇರಿಯ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಹನಿ ನೀರಾವರಿ ಅಳವಡಿಸಲು ನಿಗದಿತ ಅರ್ಜಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ, ಸಂಬಂಧಿಸಿದ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಕಳೆದ 2 ವರ್ಷದಲ್ಲಿ ತೋಟಗಾರಿಕಾ ಇಲಾಖೆಯಿಂದ ಹನಿ ನೀರಾವರಿಗೆ 74,1.43 ಲಕ್ಷ ರೂ. ಅನುದಾನ