ಬೆಂಗಳೂರು: ಕಲ್ಯಾಣ ಮಂಟಪಗಳಲ್ಲಿ ಕ್ಯಾಮರಾ ಕಳವು ಮಾಡುತ್ತಿದ್ದ ಪದವಿ ವಿದ್ಯಾರ್ಥಿಯನ್ನು ಯಶವಂತಪುರ ಪೊಲೀಸರು ಸೆರೆ ಹಿಡಿದಿದ್ದಾರೆ. ಯಶವಂತಪುರದ ಪ್ರಜ್ವಲ್ (20) ಬಂಧಿತ ಆರೋಪಿ. 3.68 ಲಕ್ಷ ರೂ. ಮೌಲ್ಯದ 2 ಕ್ಯಾಮರಾ, ಲೆನ್ಸ್, ಇಯರ್ ಪಾಡ್‌ಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಪ್ರಜ್ವಲ್ ಫ್ಲಿಪ್‌ಕಾರ್ಟ್‌ನಲ್ಲಿ ಇಯರ್ ಪಾಡ್ ಬುಕ್ ಮಾಡಿದ್ದ. ಡೆಲಿವರಿ ಬಾಯ್ ಕೈಯಿಂದ ಇಯರ್ ಪಾಡ್ ಪಡೆದು ಆತನ ಗಮನ ಬೇರೆಡೆ ಸೆಳೆದ ಆರೋಪಿ ಹಣ ನೀಡದೇ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಲಾಗಿತ್ತು.
ಖಾಸಗಿ ಕಾಲೇಜಿನಲ್ಲಿ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಆರೋಪಿ, ಸುಲಭ ಮತ್ತು ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ತಾನೇ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಿದ್ದ. ಇದಕ್ಕಾಗಿ ಪರಿಕರಗಳು ಅಗತ್ಯವಿದ್ದುದರಿಂದ ಕ್ಯಾಮರಾಗಳ ಕಳ್ಳತನಕ್ಕೆ ಇಳಿದಿದ್ದಾನೆ. ಯಶವಂತಪುರದ ಮುನಿಸ್ವಾಮಪ್ಪ ಕಲ್ಯಾಣ ಮಂಟಪ ಮತ್ತು ಶಂಕರಪುರದ ಜೈನ್ ಕಲ್ಯಾಣ ಮಂಟಪದಲ್ಲಿ ಕ್ಯಾಮರಾಮನ್‌ಗಳ ಗಮನ ಬೇರೆಡೆ ಸೆಳೆದು ಎರಡು ಕ್ಯಾಮರಾ ಕಳವು ಮಾಡಿದ್ದ.
ಆರ್.ಟಿ ನಗರದಲ್ಲಿ ಮನೆ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಮೇಲೂ ಕಳ್ಳತನ ಚಾಳಿ ಮುಂದುವರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಖೆಡ್ಡಾಕ್ಕೆ ಬೀಳಿಸಿದ ಪೊಲೀಸರು