ಬೆಂಗಳೂರು: ಹೊರಗುತ್ತಿಗೆ ಕಾರ್ಮಿಕರಿಗೆ ತಕ್ಷಣ ಕೆಲಸ ನೀಡಲು, ಲಾಕ್‌ಡೌನ್ ಅವಧಿಯ ಮತ್ತು ಜೂನ್ ತಿಂಗಳಿನಿಂದ ಇಲ್ಲಿಯವರೆಗಿನ ವೇತನ ಬಿಡುಗಡೆ ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘಟನೆ ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಹೊರಗುತ್ತಿಗೆ ಕಾರ್ಮಿಕರಿಗೆ ವೇತನ ನೀಡಬೇಕೆಂದು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದ್ದರೂ, ಬಿಸಿಯೂಟ ಕಾರ್ಮಿಕರಿಗೆ ಜೂನ್ ತಿಂಗಳಿನಿಂದ ವೇತನ ನೀಡಿಲ್ಲ ಎಂದು ಪ್ರತಿಭಟನಾಕಾರರರು ದೂರಿದರು.
ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸಂಘದ ಮನವಿ ಪತ್ರಗಳನ್ನ ಸಲ್ಲಿಸಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದರು.
ಸರ್ಕಾರದ ವಿವಿಧ ಇಲಾಖೆ ವ್ಯಾಪ್ತಿಯ ಹಾಸ್ಟೆಲ್, ವಸತಿಶಾಲೆ ಹಾಗೂ ವಸತಿ ಕಾಲೇಜುಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ಕಾರ್ಮಿಕರು ಲಾಕ್‌ಡೌನ್ ಅವಧಿಯ ನಂತರ ವೇತನವಿಲ್ಲದೇ ಎದುರಿಸುತ್ತಿರುವ ತೀವ್ರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈಗಾಗಲೇ ನಮ್ಮ ಸಂಘಟನೆಯ ನೇತೃತ್ವದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಮತ್ತು ರಾಜ್ಯ ಮಟ್ಟದ ಪ್ರತಿಭಟನೆ ಮಾಡಿ ನೇರವಾಗಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೂ ಇದುವರೆಗೂ ಕಾರ್ಮಿಕರಿಗೆ ವೇತನ ಬಿಡುಗಡೆಯಾಗಿಲ್ಲ. ಕನಿಷ್ಠ ಕೂಲಿಯಿಂದ ಜೀವನ ಸಾಗಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರು ಈಗಾಗಲೇ ಸಾಲದ ಸುಳಿಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಸರ್ಕಾರವು ಇದುವರೆಗೂ ವೇತನ ಬಿಡುಗಡೆ ಮಾಡದಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋವಿಡ್-19 ಮಹಾಮಾರಿಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ, ಲಾಕ್‌ಡೌನ್ ಸಂಧರ್ಭದಲ್ಲಿ ಕಾರ್ಮಿಕರಿಗೆ ಯಾವುದೇ ವೇತನ ಕಡಿತಗೊಳಿಸದೇ ಪೂರ್ಣ ವೇತನ ನೀಡಬೇಕು. ಯಾವುದೇ ಕಾರಣಕ್ಕೂ ಕೆಲಸದಿಂದ ವಜಾಗೊಳಿಸಬಾರದೆಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದ್ದರೂ ಅನ್ಯಾಯ ಮಾಡಲಾಗುತ್ತಿದೆ ಎಂದರು .
ಈ ಆದೇಶವು ಸರ್ಕಾರದ ಎಲ್ಲ ಇಲಾಖೆಗಳು, ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಈ ಕುರಿತು ಆರ್ಥಿಕ ಇಲಾಖೆಯು ಸ್ಪಷ್ಟವಾಗಿ ತಿಳಿಸಿದೆ. ಕಳೆದ 20 ವರ್ಷಗಳಿಂದ ಕೇವಲ ಕನಿಷ್ಠ ಕೂಲಿ ಪಡೆದು ಯಾವುದೇ ಸೌಲಭ್ಯಗಳಿಲ್ಲದೇ ಸರ್ಕಾರಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುವ ಹೊರಗುತ್ತಿಗೆ ಕಾರ್ಮಿಕರನ್ನು ಇಂತಹ ವಿಪತ್ತಿನ ಸಂದರ್ಭದಲ್ಲಿ ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಸಹಾಯ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ಸರ್ಕಾರಿ ಇಲಾಖೆಗಳು ಬಡ ಕಾರ್ಮಿಕರಿಗೆ ಆದ್ಯತೆ ಮೇರೆಗೆ ವೇತನ ನೀಡದೇ ಜೂನ್ ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವುದು ಖಂಡನೀಯ ಹಾಗೂ ಕಾರ್ಮಿಕ ಇಲಾಖೆಯು ನೀಡಿರುವ ಹಲವಾರು ಸುತ್ತೋಲೆಗಳಲ್ಲಿ ತಾವೇ ಉಲ್ಲಂಘಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕೃತವಾಗಿ ಹಾಸ್ಟೆಲ್‌ಗಳು ಪ್ರಾರಂಭವಾಗಿದ್ದರೂ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಕಡಿಮೆ ವಿದ್ಯಾರ್ಥಿಗಳ ಹಾಜರಾತಿ ನೆಪ ಹೇಳಿ ಕಳೆದ 9 ತಿಂಗಳಿನಿಂದ ಕೆಲಸ ಮತ್ತು ವೇತನವಿಲ್ಲದೇ ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಕೆಲಸ ನೀಡದಿರುವುದು ಅಮಾನವೀಯವಾಗುತ್ತದೆ ಎಂದರು.
ಬೇಡಿಕೆಗಳು :
1. ಈ ಹಿಂದೆ ಕೆಲಸ ಮಾಡಿರುವ ಎಲ್ಲಾ ಹೊರಗುತ್ತಿಗೆ ಕಾರ್ಮಿಕರಿಗೆ ಕೂಡಲೇ ಕೆಲಸವನ್ನು ನೀಡಬೇಕು.
2. ಲಾಕ್‌ಡೌನ್ ಅವಧಿ ವೇತನವನ್ನು ಪ್ರಿಮೆಟ್ರಿಕ್, ಪೊಸ್ಟ್ ಮೆಟ್ರಿಕ್ ಮತ್ತು ವಸತಿಶಾಲೆಗಳನ್ನು ಒಳಗೊಂಡಂತೆ ಎಲ್ಲಾ ಹೊರಗುತ್ತಿಗೆ ಕಾರ್ಮಿಕರಿಗೂ ಪಾವತಿಸಬೇಕು.
3. ಜೂನ್ ತಿಂಗಳಿನಿಂದ ವೇತನವನ್ನು ಎಲ್ಲಾ ಕಾರ್ಮಿಕರಿಗೂ ಬಿಡುಗಡೆ ಮಾಡಬೇಕು.
4. ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಎಸ್‌ಐ ಮತ್ತು ಇಪಿಎಫ್ ಅನ್ನು ಪಾವತಿ ಮಾಡಿರುವ ದಾಖಲೆಗಳನ್ನು ಕಾರ್ಮಿಕರಿಗೆ ಒದಗಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು.