ಬೆಂಗಳೂರು: ನಗರದ ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸುವಂತೆ ಮಾರ್ಷಲ್ಸ್ ಮೂಲಕ ತಿಳಿಸುತ್ತಾ ಕಟ್ಟುನಿಟ್ಟಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡುತ್ತಿರುವ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಜನದಟ್ಟಣೆ ಇರುವ ಕಡೆ 54 ತಂಡಗಳು ಕಣ್ಣಿಟ್ಟಿದ್ದಾರೆ. ಯಾರು ಪದೇ ಪದೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡುತ್ತಾರೋ ಅಂತಹ ವಾಣಿಜ್ಯ ಕಟ್ಟಡ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಬಿಡುವ ಕಠಿಣ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಕೋವಿಡ್ ಬೆಡ್ಗಳ ಸಂಖ್ಯೆ 3,400ರಷ್ಟು ಇದ್ದು, ಈಗ 700ಕ್ಕೆ ಇಳಿಕೆ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ಗಳ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿದೆ. 60 ರಿಂದ ಈಗ 10ಕ್ಕೆ ಇಳಿಸಲಾಗಿದೆ. ಉಳಿದ ಸಿಸಿಸಿ ಸೆಂಟರ್ಗಳಲ್ಲಿ ವ್ಯವಸ್ಥೆಗಳು ಹಾಗೇ ಇದ್ದು, ಅಗತ್ಯ ಬಿದ್ದಾಗ ಬಳಸಿಕೊಳ್ಳಲಾಗುತ್ತದೆ ಎಂದರು. ಬಿಬಿಎಂಪಿ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ, ನಗರದಲ್ಲಿ ಒಟ್ಟು 6,162 ಹಾಸಿಗೆಗಳಿದ್ದು ಈ ಪೈಕಿ 820 ಜನರು ದಾಖಲಾಗಿದ್ದಾರೆ. 5342 ಬೆಡ್ಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ.
ವ್ಯಾಕ್ಸಿನ್ ವಿತರಣೆ:
ವ್ಯಾಕ್ಸಿನ್ ವಿತರಣೆ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರತಿನಿತ್ಯ ದಿನಕ್ಕೆ 80 ಸಾವಿರ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಲಭ್ಯತೆಗೆ ತಕ್ಕಂತೆ ವ್ಯಾಕ್ಸಿನ್ ವಿತರಣೆ ಹೆಚ್ಚು ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅಲ್ಲೇ ಕ್ಯಾಂಪ್ ಹಾಕಿ, ವ್ಯಾಕ್ಸಿನ್ ವಿತರಿಸಲಾಗುತ್ತಿದೆ. 5-6 ದಿನದಲ್ಲಿ ಈ ಕಾಲೇಜು ಮಕ್ಕಳ ವ್ಯಾಕ್ಸಿನೇಷನ್ ಮುಕ್ತಾಯವಾಗಬಹುದು. ನಂತರ ಜನಸಾಮಾನ್ಯರಿಗೆ ಹೆಚ್ಚು ಪೂರೈಸಲಾಗುವುದು. ಸರ್ಕಾರದ ಮಟ್ಟದಲ್ಲಿ, ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಲಾಗುತ್ತಿದ್ದು, ಹೆಚ್ಚು ವ್ಯಾಕ್ಸಿನ್ ಒದಗಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದರು.
ಜನರು ವ್ಯಾಕ್ಸಿನ್ ಪಡೆಯಲು ನಿರಾಕರಿಸುತ್ತಿದ್ದಾರೆ :
ಕೆಲವೆಡೆ ಜನರು ವ್ಯಾಕ್ಸಿನ್ ಪಡೆಯಲು ನಿರಾಕರಿಸುತ್ತಿದ್ದಾರೆ ಎಂಬ ದೂರು ಇದ್ದು, ಯಾರಿಗೆ ಆಸಕ್ತಿ ಇಲ್ಲ, ಅವರಿಗೆ ರಾಜಕೀಯ ಮುಖಂಡರ ಮೂಲಕ ಮನವರಿಕೆ ಮಾಡಿಸಿಕೊಡಲಾಗುತ್ತಿದೆ. ಎಷ್ಟು ಜನ ವ್ಯಾಕ್ಸಿನ್ ಪಡೆದಿದ್ದಾರೆ ಎಂಬ ಸರ್ವೇ ಕೂಡ ನಡೆಯುತ್ತಿದೆ. ಸುಮಾರು ಶೇ.20ರಷ್ಟು ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ನಿರಾಕರಿಸುತ್ತಾರೆಂದು ತಿಳಿದುಬಂದಿದೆ. ಆದರೆ ನಗರದಲ್ಲಿ ಲಸಿಕೆ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್: ಪುಸ್ತಕ ಮಾರಾಟವಿಲ್ಲದೆ ಕಂಗಾಲಾದ ಪುಸ್ತಕ ವ್ಯಾಪಾರಿಗಳು
ನಗರದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.1 ಕ್ಕಿಂತ ಕಡಿಮೆ ಇದೆ. ಇನ್ನೂ ಕಡಿಮೆ ಮಾಡಬೇಕಿದೆ. ಕಂಟೈನ್ಮೆಂಟ್, ಐಸೋಲೇಷನ್ ಪ್ರಕ್ರಿಯೆ ಮುಂದುವರೆದಿದೆ. ಕೆಲ ವಾರ್ಡ್ಗಳಲ್ಲಿ ಹೆಚ್ಚು ಪ್ರಕರಣ ಇದೆ. ಅಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗ್ತಿದೆ ಎಂದು ತಿಳಿಸಿದರು.