ಯಲಹಂಕ(ಬೆಂಗಳೂರು): ವೃದ್ಧ ದಂಪತಿ ಲಕ್ಷ ರೂಪಾಯಿ ಖರ್ಚು ಮಾಡಿ ಕಬ್ಬಿಣದ ಶೆಡ್ ನಿರ್ಮಿಸಿ ನಿನ್ನೆಯಷ್ಟೇ ಹೊಸ ಶೆಡ್‌ಗೆ ಪೂಜೆ ಮಾಡಿ ಕುರಿಗಳನ್ನ ಬಿಟ್ಟಿದ್ದರು. ಆದರೆ, ಬೆಳಗ್ಗೆದ್ದು ನೋಡುವಷ್ಟರಲ್ಲಿ ಬೀದಿನಾಯಿ ದಾಳಿಗೆ 10 ಕುರಿಗಳು ಸಾವನ್ನಪ್ಪಿದ್ದರೆ, 15 ಕುರಿಗಳು ಗಾಯಗೊಂಡಿದ್ದವು.
ಬೆಂಗಳೂರು ಜಿಲ್ಲೆಯ ಯಲಹಂಕ ತಾಲೂಕಿನ ಶಾನುಭೋಗನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. 65 ವರ್ಷದ ಕೃಷ್ಣಪ್ಪ ದಂಪತಿ ಜೀವನೋಪಾಯಕ್ಕೆಂದು ಮೂವತ್ತು ಕುರಿಗಳನ್ನು ಕೊಂಡು ತಂದು ಸಾಕುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಕಬ್ಬಿಣದ ಶೆಡ್ ನಿರ್ಮಿಸಿ ನಿನ್ನೆಯಷ್ಟೆ ಪೂಜೆ ಮಾಡಿ ಕುರಿಗಳನ್ನು ಶೆಡ್ಗೆ ಬಿಟ್ಟಿದ್ದರು. ರಾತ್ರಿ ಎರಡು ಗಂಟೆ ಸುಮಾರಿಗೆ ಕುರಿಗಳಿಗೆ ಹುಲ್ಲು ಹಾಕಿ ಅವರು ಮಲಗಿದ್ದಾರೆ. ಆದರೆ, ಬೆಳಗ್ಗೆ ಎದ್ದು ನೊಡಿದಾಗ ಕುರಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡುಬಂದಿದೆ.
ನಿನ್ನೆ ರಾತ್ರಿ ಕುರಿಗಳ ಮೇಲೆ ದಾಳಿ ನಡೆಸಿದ ಬೀದಿ ನಾಯಿಗಳು 10 ಕುರಿಗಳನ್ನುಸಾಯಿಸಿ ಉಳಿದ ಹದಿನೈದು ಕುರಿಗಳನ್ನು ಗಾಯಗೊಳಿಸಿವೆ.