ಬೆಂಗಳೂರು: ಈಗಾಗಲೇ ಮಾನ್ಸೂನ್ ಪ್ರವೇಶ ತಡವಾಗಿದ್ದು, ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ ಮುಂಗಾರು ಪ್ರವೇಶ ಇನ್ನಷ್ಟು ತಡವಾಗಿದೆ. ಜೂನ್ ಮೊದಲ ವಾರದಲ್ಲೇ ರಾಜ್ಯದ ಅರ್ಧ ಭಾಗಕ್ಕೆ ಮುಂಗಾರು ಪ್ರವೇಶ ಆಗಬೇಕಿತ್ತು. ಆದರೆ ಮಾನ್ಸೂನ್ ಮಳೆ ಇನ್ನೂ ಕೇರಳ ದಾಟಿ ರಾಜ್ಯಕ್ಕೆ ಎಂಟ್ರಿಯಾಗಿಲ್ಲ.
ಕರಾವಳಿ ಹಾಗೂ ಕೊಡಗಿನಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯಾಗುತ್ತಿದೆ. ಆದರೆ ಮುಂಗಾರು ಪ್ರವೇಶ ಆಗದ ಕಾರಣ ರಾಜ್ಯದ ಇತರೆ ಜಿಲ್ಲೆಗಳಿಗೆ ಮಳೆ ಕೊರತೆಯಾಗಿದೆ. ನಿರೀಕ್ಷೆಯಂತೆ ಮುಂಗಾರು ಮಳೆಯಾಗದ ಕಾರಣ ರೈತರ ವ್ಯವಸಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ.
ಕೇರಳದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಆವರಿಸಿದ್ದು, ಬಹುಶಃ ನಾಳೆ ಅಥವಾ ನಾಡಿದ್ದು ಕರಾವಳಿಗೆ ಮುಂಗಾರು ಪ್ರವೇಶವಾಗಬಹುದು. ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯಕ್ಕೆ ವ್ಯಾಪಿಸಬಹುದು ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ಹವಾಮಾನ ತಜ್ಞ ಗವಾಸ್ಕರ್ ಈಟಿವಿ ಭಾರತ್ಗೆ ತಿಳಿಸಿದರು. ಅಲ್ಲದೆ 2011ರ ಬಳಿಕ ಇದೇ ಮೊದಲ ಬಾರಿಗೆ ಮಾನ್ಸೂನ್ ಇಷ್ಟು ತಡವಾಗಿ ರಾಜ್ಯಕ್ಕೆ ಪ್ರವೇಶವಾಗ್ತಿದೆ ಎಂದರು.
ಕಳೆದ 8 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಮುಂಗಾರು ಪ್ರವೇಶ ಇಷ್ಟೊಂದು ತಡವಾಗಿದೆ. 2014, 2015ರಲ್ಲಿ ಜೂನ್ 9ಕ್ಕೆ ಅಧಿಕೃತವಾಗಿ ಮುಂಗಾರು ಆರಂಭವಾಗಿತ್ತು. ಆದ್ರೆ ಈ ಬಾರಿಯ ಮುಂಗಾರು ಪ್ರವೇಶದ ಬಗ್ಗೆ ಹವಾಮಾನ ಇಲಾಖೆ ಈವರೆಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.