ಬೆಂಗಳೂರು : ಸಿಎಂ ಬಿಎಸ್ವೈ ಮೊದಲು ಈ ಅಲೆಯಲ್ಲಿ ಜನ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮೂರನೇ ಅಲೆ ಎದುರಿಸಲು ಸಿದ್ಧರಾಗಿ ಎಂದು ಕರೆ ಕೊಟ್ಟಿದ್ದಾರೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಿ, ನಮ್ಮದೇನು ತಕರಾರು ಇಲ್ಲ. ಎರಡನೇ ಅಲೆಯಲ್ಲಿ ಜನ ಸಾಯುವುದನ್ನು ತಪ್ಪಿಸಲು ಕಾರ್ಯಕ್ರಮ ರೂಪಿಸಬೇಕು.
ವ್ಯಾಕ್ಸಿನ್ ನೀಡುತ್ತೇನೆ ಎಂದು ಹೇಳಿದರು ಹಾಗೂ ಬೌರಿಂಗ್ ಆಸ್ಪತ್ರೆಗೆ ತೆರಳಿ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು. ಆದರೆ, ನಾನು ಮಕ್ಕಳಿಗೋಸ್ಕರ ನನ್ನ ಮನೆಯಲ್ಲೇ ಕುಳಿತು ನೋಂದಣಿ ಮಾಡಲು ಪ್ರಯತ್ನಿಸಿದೆ.
ಆದರೆ, ಅದು ಸಾಧ್ಯವಾಗಲಿಲ್ಲ. ಯಾರಿಂದಲೂ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇದೆ. ಆದರೆ, ಸರ್ಕಾರಕ್ಕೆ ಯಾವುದೇ ನಿಖರತೆ ಇಲ್ಲವಾಗಿದೆ ಎಂದು ತಿಳಿಸಿದರು.
ಸಿಇಟಿ ಬೋರ್ಡ್ ಮಾದರಿಯಲ್ಲಿ ಯಾವ ಕಾಲೇಜಿನಲ್ಲಿ ಸೀಟು ಇದೆ ಎಂದು ಮಾಹಿತಿ ನೀಡಲಾಗುತ್ತದೆಯೋ ಅದೇ ರೀತಿ ಆನ್ ಲೈನ್ ಮೂಲಕವೇ ಎಲ್ಲ ಮಾಹಿತಿ ದೊರಕಿಸುವ ರೀತಿಯ ವ್ಯವಸ್ಥೆ ಮಾಡಿ. ಅರ್ಧ ಡಜನ್ ಸಚಿವರನ್ನು ಇದೇ ಕಾರ್ಯಕ್ಕೆ ನಿಯೋಜಿಸಿದ್ದು, ಅವರನ್ನು ಸದ್ಬಳಕೆ ಮಾಡಿಕೊಳ್ಳಿ.
ಆಮ್ಲಜನಕ ಲಭ್ಯತೆ ಎಷ್ಟಿದೆ, ಎಲ್ಲಿಂದ ತರಿಸಲಾಗಿದೆ, ಪರಿಸ್ಥಿತಿ ಯಾವ ರೀತಿ ಇದೆ ವ್ಯಾಕ್ಸಿನೇಷನ್ ಎಲ್ಲಿ ನೀಡಲಾಗುತ್ತದೆ ಎಂಬುದು ಸೇರಿದಂತೆ ಎಲ್ಲ ಮಾಹಿತಿಯನ್ನು ಆನ್ಲೈನ್ ಮೂಲಕವೇ ಒದಗಿಸುವ ಕಾರ್ಯ ಆಗಬೇಕು. ಶಿವಮೊಗ್ಗದಲ್ಲಿ ಒಬ್ಬ ಸಚಿವರು ಹೇಳಿದ್ದಾರೆ ನಮ್ಮ ಬಳಿ ನೋಟನ್ನು ಮುದ್ರಿಸುವ ಯಂತ್ರ ಇಲ್ಲ ಅಂತ.
ಅದೇ ನಮ್ಮ ಸಚಿವರು ನೋಟ್ ಎಣಿಸುವ ಯಂತ್ರವನ್ನು ಇರಿಸಿಕೊಂಡಿದ್ದಾರಲ್ಲಾ! ಜನರಿಗೆ ಸೇವೆ ಸೌಲಭ್ಯವನ್ನು ನೀಡಲು ಸಾಧ್ಯವಿಲ್ಲ ಅಂದರೆ ಆಗಲ್ಲ ಎಂದು ತಿಳಿಸಿ. ಸರ್ಕಾರದ ಬಳಿ ದುಡ್ಡು ಇಲ್ಲ ಎಂದು ಹೇಳಿ. ಜನ ನೋವಿನಲ್ಲಿದ್ದಾರೆ ಲಾಕ್‌ಡೌನ್ ಸಂದರ್ಭದಲ್ಲಿ ಸಹಾಯ ಮಾಡಿ ಎಂದು ಕೇಳುತ್ತಿದ್ದಾರೆ. ಸಾಮಾನ್ಯ ದಿನದಲ್ಲಿ ಯಾರಾದರೂ ಪರಿಹಾರ ಕೇಳುತ್ತಾರಾ ಎಂದು ಪ್ರಶ್ನಿಸಿದರು.
ತಮಿಳುನಾಡು ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಪರಿಹಾರ ಕೊಡುವ ಘೋಷಣೆ ಮಾಡಿದೆ. ಪ್ರತಿ ಖಾತೆದಾರರಿಗೆ ತಲಾ 4000 ರೂ. ಹಾಕುತ್ತೇವೆ ಎಂದಿದ್ದಾರೆ. ನಮ್ಮ ರಾಜ್ಯದ ಜನ ಕೇಳುತ್ತಿದ್ದಾರೆ. ಹಾರ್ದಿಕ ಸಮಸ್ಯೆ ಎದುರಾಗಲಿದೆ ಎಂಬ ಆತಂಕಕ್ಕೆ ಜನ ನಗರ ತೊರೆದು ತಮ್ಮ ತವರು ಸೇರುತ್ತಿದ್ದಾರೆ.
ಅವರಿಗೆ ಹಣ ನೀಡುವ ಭರವಸೆ ಸಿಕ್ಕರೆ ಇಲ್ಲೇ ಉಳಿದುಕೊಳ್ಳುತ್ತಾರೆ. ಈಗಲೂ ಪ್ರತಿ ಬಡವರ ಖಾತೆಗೆ ತಲಾ 10 ಸಾವಿರ ರೂಪಾಯಿ ಹಾಕುವ ಕಾರ್ಯ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ ಎಂದರು.
ಇದನ್ನೂ ಓದಿ : ಸಿಗದ ಆಂಬ್ಯುಲೆನ್ಸ್: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಬೈಕ್ ಮೇಲೆಯೇ ಕೊಂಡೊಯ್ದರು!
ರೈತರು ಬೆಳೆದ ಬೆಳೆಯನ್ನು ಕೊಳ್ಳುವವರಿಲ್ಲ. ಸಹಕಾರ ಕೃಷಿ ಹಾಗೂ ತೋಟಗಾರಿಕಾ ಸಚಿವರು ರೈತರು ಬೆಳೆದ ಹಣ್ಣು ಮತ್ತು ತರಕಾರಿಯನ್ನು ಖರೀದಿಸುವ ಕಾರ್ಯ ಮಾಡಬೇಕು. ನೀವೆಲ್ಲ ರೈತರ ಬಳಿ ಹೋಗಿ ಅವರ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ.
ಎಲ್ಲೋ ಕೆಲ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದನ್ನು ಮಾತ್ರ ಗಮನಿಸಿದ್ದೇನೆ. ಕನಿಷ್ಠ ರೈತರ ಬಳಿ ಹಾಗೂ ಎಪಿಎಂಸಿಗೆ ಹೋಗಿ ಅಲ್ಲಿ ಸಮಸ್ಯೆಯನ್ನು ಆಲಿಸಿ. ರೈತರಿಗೆ ಸಿಗುತ್ತಿರುವ ಮೇಲೆ ಹಾಗೂ ಆಗುತ್ತಿರುವ ನಷ್ಟ ಮತ್ತು ಅದಕ್ಕೆ ಕೈಗೊಳ್ಳಬಹುದಾದ ಪರಿಹಾರದ ಕುರಿತು ಚಿಂತನೆ ನಡೆಸಿ.
ಇದೆಲ್ಲವನ್ನು ಮಾಡದೆ ಕೇವಲ ಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಿದರೆ ಸಮಸ್ಯೆ ಪರಿಹಾರ ಆಗೋದಿಲ್ಲ. ಇಂದು ನಾನು ಕನಕಪುರ ಕ್ಷೇತ್ರಕ್ಕೆ ತೆರಳಲಿದ್ದು ಅಲ್ಲಿನ ಸಮಸ್ಯೆಯನ್ನು ಆಲಿಸುತ್ತೇನೆ. ಅಲ್ಲಿನ ವಾಸ್ತವಾಂಶ ತಿಳಿದು ನಂತರ ಮಾಧ್ಯಮಗಳಿಗೆ ಮಾತನಾಡುತ್ತೇನೆ ಎಂದರು.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಬೇಸರ ವ್ಯಕ್ತಪಡಿಸಿದ ಡಿಕೆಶಿ, ಪಾಪ ಸಂಸದ ತೇಜಸ್ವಿ ಸೂರ್ಯ ಗೆ ಏನಂತ ಹೇಳಲಿ. ತಾನೇ ಬಾಯಿಗೆ ಬಂದಂತೆ ಮಾತನಾಡಿಕೊಂಡು, ಪಂಚರ್ ಹಾಕುವರು ಎಂದು ಹೇಳಿದ್ದರು. ಬೆಂಗಳೂರು ಭಯೋತ್ಪಾದಕರ ನಗರಿ ಯಾಗುತ್ತಿದೆ ಎಂದು ಹೇಳಿದ್ದರು.
ಮುಸ್ಲಿಮರು ಮದರಸಾ ನಡೆಸುತ್ತಿದ್ದಾರೆ ಎಂದು 17 ಜನರ ಹೆಸರನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೀಗ ಅಧಿಕಾರಿಗಳು ಬರೆದುಕೊಟ್ಟರು ನಾನು ಓದಿದ್ದೇನೆ ಎಂದು ಹೇಳುತ್ತಿದ್ದಾರೆ. ಓದಿದ್ದು ಇವರ ಅಥವಾ ಅಧಿಕಾರಿಗಳಾ? ಅಧಿಕಾರಿಗಳು ಯಾಕೆ ನೀಡುತ್ತಾರೆ ಇವರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಯಾವುದೇ ಅಧಿಕಾರಿಗಳು ಮಾಹಿತಿ ನೀಡುವುದಾದರೂ ಪರಿಪೂರ್ಣವಾಗಿ ನೀಡುತ್ತಾರೆ ಈ ರೀತಿ ಕೆಲವು ಹೆಸರುಗಳನ್ನು ಮಾತ್ರ ನೀಡುವುದಿಲ್ಲ. ಈ ರಾಜ್ಯದಲ್ಲಿ ವಿಷ ಬೀಜವನ್ನು ಬಿತ್ತುವ ಕಾರ್ಯಕ್ಕೆ ಮತ್ತೊಂದು ಹೆಸರು ಸೂರ್ಯ. ಸೌಹಾರ್ದತೆಯ ವಿಷ ಬೀಜ ಬಿತ್ತುವವರ ಹೆಸರು ತೇಜಸ್ವಿ ಸೂರ್ಯ ಎಂದು ಅಭಿಪ್ರಾಯಪಟ್ಟರು.