ಬೆಂಗಳೂರು: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಎಂಬ ಹೊಸ ಹೆಸರಿನಲ್ಲಿ ಆರ್ ಪಿ ಐ ಪಕ್ಷವು ಕೇಂದ್ರ ಚುನಾವಣಾ ಆಯೋಗದಲ್ಲಿ ನೋಂದಣಿಗೊಂಡಿದೆ. ಆರ್ ಪಿ ಐ ನ ರಾಷ್ಟ್ರೀಯ ಮುಖಂಡರಾದ ರಾಮ್ದಾಸ್ ಅಠವಳೆ ನೇತೃತ್ವದಲ್ಲಿ ಆರ್.ಪಿ.ಐ ಪಕ್ಷವು ಅಸ್ತಿತ್ವಕ್ಕೆ ಬಂದಿದ್ದು, ದೇಶದ 31 ರಾಜ್ಯಗಳಲ್ಲೂ ಈ ಹೊಸ ಹೆಸರಿನ ಪಕ್ಷವು ಅಸ್ಥಿತ್ವದಲ್ಲಿದೆ. ಆಯಾ ರಾಜ್ಯಗಳಲ್ಲಿ ಹೊಸ ರಾಜ್ಯ ಮಂಡಳಿಗಳು ಆಯ್ಕೆಯಾಗಲಿದೆ ಎಂದು ರಾಜ್ಯಾಧ್ಯಕ್ಷ ಡಾ ಎಂ ವೆಂಕಟಸ್ವಾಮಿ ಅವರು ತಿಳಿಸಿದರು.
ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಮುಂಬಯಿಯಲ್ಲಿ ನಮ್ಮ ಪಕ್ಷದ ಹೊಸ ರಾಷ್ಟ್ರೀಯ ಮಂಡಳಿಯು ರಚನೆಗೊಂಡಿದೆ. ಚಿಕ್ಕಬಳ್ಳಾಪುರದ ಜಿ. ಸಿ ವೆಂಕಟರಮಣಪ್ಪ ಮತ್ತು ಮೈಸೂರಿನ ಎಂ. ಮುನಿರಾಜು ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ನಮ್ಮ ಪಕ್ಷದ ಹೊಸ ರಾಜ್ಯ ಮಂಡಳಿಯನ್ನು ಆಯ್ಕೆ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ. ಮುಂದಿನ ತಿಂಗಳು 13 ಮತ್ತು 14ರಂದು ಬೆಂಗಳೂರಿನಲ್ಲಿ ರಾಜ್ಯ ಮಂಡಳಿ ಆಯ್ಕೆಯ ರಾಜ್ಯಮಟ್ಟದ ಸಭೆಯು ನಡೆಯಲಿದೆ ಎಂದು ಹೇಳಿದರು.
ಜಿಲ್ಲಾ ಸಮಿತಿ ಆಯ್ಕೆಗೆ ಚುನಾವಣೆ: ಸೆಪ್ಟೆಂಬರ್ 17 ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳನ್ನು ರಚಿಸಲು ಸಕ್ರಿಯ ಸದಸ್ಯರ ಆಯ್ಕೆಯ ಚುನಾವಣೆ ನಡೆಯಲಿದೆ. ಪ್ರತಿ ಜಿಲ್ಲೆಯಿಂದ ತಲಾ 25 ಸಕ್ರೀಯ ಸದಸ್ಯರನ್ನು ಆಯ್ಕೆ ಮಾಡುವುದರ ಮೂಲಕ ಆಯಾ ಜಿಲ್ಲಾ ಹೊಸ ಸಮಿತಿಗಳನ್ನು ರಚಿಸಲಾಗುವುದು. ಸೆಪ್ಟೆಂಬರ್ 17 ರಿಂದ 20ರವರೆಗೆ ಹೈದರಾಬಾದ್ ಕರ್ನಾಟಕದ 7 ಜಿಲ್ಲೆಗಳಲ್ಲಿ, ಸೆಪ್ಟೆಂಬರ್23 ರಿಂದ 25ರವರೆಗೆ ಉತ್ತರ ಕರ್ನಾಟಕದ ಎಲ್ಲ 8 ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿ ಚುನಾವಣೆಗಳು ನಡೆಯಲಿದೆ.
ಸೆಪ್ಟೆಂಬರ್ 26 ರಿಂದ 30ರವರೆಗೆ ಮೈಸೂರು ವಿಭಾಗದ ಆರು ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿ ಸಭೆಗಳನ್ನು ನಡೆಸಲಾಗುವುದು. ಅಕ್ಟೋಬರ್ 1 ರಿಂದ 5ರವರೆಗೆ ಉಳಿದೆಲ್ಲ ಜಿಲ್ಲೆಗಳಲ್ಲೂ ಚುನಾವಣೆಗಳನ್ನು ನಡೆಸಲಾಗುವುದು. ಈಗಾಗಲೇ ಬೆಂಗಳೂರು ವಿಭಾಗದ 6 ಜಿಲ್ಲೆಗಳಲ್ಲಿ ಸಕ್ರಿಯ ಸದಸ್ಯರ ಜಿಲ್ಲಾ ಚುನಾವಣೆಗಳು ಪೂರ್ಣಗೊಂಡಿವೆ.
ರಾಜ್ಯದ 31 ಜಿಲ್ಲಾ ಸಮತಿಗಳನ್ನು ರಚಿಸಿದ ನಂತರ ಅಕ್ಟೋಬರ್ 13ರಂದು ಬೆಂಗಳೂರಿನಲ್ಲಿ ಆರ್ಪಿಐ ನ ಹೊಸ ರಾಜ್ಯ ಮಂಡಳಿಯನ್ನು ರಚಿಸಲಾಗುವುದು. ಹಿರಿಯ ವಕೀಲ ಗೌತಮ್ ಉಲ್ಲಾಳ ಚುನಾವಣಾಧಿಕಾರಿಯಾಗಿ ರಾಜ್ಯಮಂಡಳಿ ಚುನಾವಣೆ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ಸೆ. 24ರಂದು ಮೈಸೂರು ವಿಭಾಗೀಯ ಸಮಾವೇಶ : ಇದೇ ತಿಂಗಳ 24ರಂದು ಮೈಸೂರು ವಿಭಾಗ ಮಟ್ಟದ ಕಾರ್ಯಕರ್ತರ ಸಮಾವೇಶವು ಮೈಸೂರಿನಲ್ಲಿ ನಡೆಯುತ್ತಿದ್ದು, ಕೇಂದ್ರ ಸಮಾಜ ಕಲ್ಯಾಣ ಸಚಿವರು ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ರಾಮದಾಸ್ ಅಠಾವಳೆ ಉದ್ಘಾಟಿಸುವರು ಎಂದು ತಿಳಿಸಿದರು.