ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಪಟ್ಟಿರುವ ಪಠ್ಯಪುಸ್ತಕ ಕೇಸರಿಕರಣ ವಿವಾದ ಹಾಗೂ ಈ ಶೈಕ್ಷಣಿಕ ವರ್ಷದಿಂದ ಹತ್ತನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್, ಸಮಾಜ ಸುಧಾರಕರಾದ ನಾರಾಯಣ ಗುರು, ಪೆರಿಯಾರ್ ಇವರುಗಳನ್ನು ಕೈಬಿಟ್ಟಿದ್ದನ್ನು ಖಂಡಿಸಿ ಬುದ್ಧಿಜೀವಿ ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದನ್ನು ವಿರೋಧಿಸಿ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದಾರೆ.
ಹೆಡಗೇವಾರ್ ಮತ್ತು ಮಹಿಳೆಯರಿಗೆ ಅವಮಾನ ಅಪಮಾನ ಮಾಡುವ ರೀತಿಯಲ್ಲಿರುವ ಬನ್ನಂಜೆ ಗೋವಿಂದಾಚಾರ್ಯ ಪಾಠವನ್ನು ಕೈಬಿಡುವ ಬಗ್ಗೆ ಚರ್ಚಿಸಲು ಇಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ನೇತೃತ್ವದಲ್ಲಿ ಸಭೆ ಸೇರಲಾಗಿತ್ತು. ಬೆಂಗಳೂರಿನ ಕೆ.ಆರ್. ಸರ್ಕಲ್ ಹತ್ತಿರ ಅಲುಮ್ಮಿನಿಯಂ ಹಾಲ್ನಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳಾದ ಎನ್.ಎಸ್.ಯು.ಐ, ಎ.ಐ.ಎಸ್. ಎಫ್, ಕೆ.ವಿ.ಎಸ್, ಮಾನವ ಬಂಧುತ್ವ ವೇದಿಕೆ, ಜನವಾದಿ ಮಹಿಳಾ ಸಂಘಟನೆ, ವಕೀಲರ ಸಂಘ, ದಲಿತ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ಹಿರಿಯ ಸಾಹಿತಿಗಳು ಸೇರಿ ಪರಿಷ್ಕರಣೆಯ ವಿವಿಧ ವಿಧಗಳನ್ನು ವಿಮರ್ಶೆ ಮಾಡಿ ಚರ್ಚಿಸಿದ್ದಾರೆ.
ಇದನ್ನೂ ಓದಿ: ಭುಗಿಲೆದ್ದ ಪಠ್ಯಪುಸ್ತಕ ಪರಿಷ್ಕರಣೆ ಸೇರ್ಪಡೆ-ಕಡಿತ ವಿಚಾರ.. ಎಲ್ಲದಕ್ಕೂ ಖುದ್ದು ವಿವರಣೆ ನೀಡಿದ್ರು ಶಿಕ್ಷಣ ಸಚಿವ
ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಕೆಲವು ಪಾಠಗಳನ್ನು ಕೈ ಬಿಟ್ಟಿರುವುದನ್ನು ಖಂಡಿಸಿದರು. ರೋಹಿತ್ ಚಕ್ರತೀರ್ಥ ಸಮಿತಿ ರದ್ದು ಮಾಡಲು ಆಗ್ರಹಿಸಿ, ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಎಸ್.ಎಫ್.ಐ, ಕೆ.ವಿ.ಎಸ್, ಎ.ಐ.ಎಸ್. ಎಫ್, ಎನ್.ಎಸ್.ಯು.ಐ, ದಲಿತ ಹಾಗೂ ಮಹಿಳಾ ಸಂಘಟನೆಗಳು ಸೇರಿದಂತೆ ಹಲವರು ಸಭೆಯಲ್ಲಿ ಚರ್ಚೆ ನಡೆಸಿದರು. ಮೇ.31 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಒಂದು ದಿನ ಪ್ರತಿಭಟನೆ ಮಾಡಲು ತೀರ್ಮಾನ ಮಾಡಲಾಯಿತು ಎಂದು ಹೇಳಿದರು.