ಬೆಂಗಳೂರು: ರೈತ ಸಂಘಟನೆಗಳ ಆಗ್ರಹವನ್ನು ಪರಿಗಣಿಸಿರುವ ಸರ್ಕಾರ ರಾಜ್ಯದ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದೆ. 31 ಜಿಲ್ಲೆಗಳ ಬೆಳೆ ನಷ್ಟ ಆಧರಿಸಿ 2023-24 ನೇ ಸಾಲಿನ ಬರ ಪರಿಹಾರಕ್ಕಾಗಿ ಎಸ್ಡಿಆರ್ಎಫ್ ಅಡಿ ಇಂದು 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಮುಂಗಾರು ವೈಫಲ್ಯದಿಂದ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಕೆಲವು ರೈತರು ಬೆಳೆದಿದ್ದರೂ ನೀರಿನ ಕೊರತೆಯಿಂದ ಬೆಳೆ ಒಣಗಿ ಹೋಗಿದ್ದವು. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ರೈತ ಸಂಘಟನೆಗಳು ಬೆಳೆ ಪರಿಹಾರ ಪೋಷಣೆ ಮಾಡಬೇಕೆಂದು ಒತ್ತಾಯಿಸಿದ್ದವು. ಅದರಂತೆ ರಾಜ್ಯದಲ್ಲಿನ ಮುಂಗಾರು ಹಂಗಾಮಿನ ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿ 31 ಜಿಲ್ಲೆಗಳಿಗೂ 324 ಕೋಟಿ ರೂ. ಬೆಳೆ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನೈರುತ್ಯ ಮುಂಗಾರು ರಾಜ್ಯಕ್ಕೆ ಜೂನ್ 18 ರಂದು ಪ್ರವೇಶಿಸಿ ರಾಜ್ಯದೆಲ್ಲೆಡೆ 14 ದಿನಗಳಲ್ಲಿ ವ್ಯಾಪಿಸಿತ್ತು. ಸಾಮಾನ್ಯ ದಿನಕ್ಕಿಂತ ಒಂದು ವಾರ ತಡವಾಗಿ ಮುಂಗಾರು ಆಗಮಿಸಿತ್ತು. ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ. 56 ರಷ್ಟು ಕೊರತೆ ಉಂಟಾಗಿದೆ. ಜುಲೈ ತಿಂಗಳಲ್ಲಿ ಮುಂಗಾರು ಚುರುಕುಗೊಂಡು ವಾಡಿಕೆಗಿಂತ ಶೇ. 29 ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಶೇ. 73 ರಷ್ಟು ಮಳೆ ಕೊರತೆಯಾಗಿದ್ದು, ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿರುವುದು ಕಂಡುಬಂದಿದೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ 2020ರ ಅನ್ವಯ ಕಡ್ಡಾಯ ಮತ್ತು ತತ್ಪರಿಣಾಮ ಸೂಚಕಗಳ ನಿರಂತರ ಮೇಲ್ವಿಚಾರಣೆ ಆಧಾರದ ಮೇಲೆ ರಾಜ್ಯದ 216 ತಾಲೂಕುಗಳನ್ನು ಬರಪಡೀತ ತಾಲೂಕುಗಳೆಂದು ಈಗಾಗಲೇ ಘೋಷಿಸಲಾಗಿದೆ.
ಸಿದ್ದರಾಮಯ್ಯ ಆರೋಪ: ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಆರೋಪಿಸಿದ್ದರು. ಕೆಲವು ಬಾರಿ ಮನವಿ ಮಾಡಿಕೊಂಡರೂ ಕೇಂದ್ರ ಸರ್ಕಾರ ಈವರೆಗೆ ಬರ ಪರಿಹಾರಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರದಿಂದ ಬರ ಪರಿಹಾರ ವೀಕ್ಷಣೆ ಮಾಡಲು ಕೇಂದ್ರದಿಂದ ತಂಡ ಬಂದಿತ್ತು. ಪರಿಶೀಲನೆ ಮಾಡಿ 116 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದ್ದರು. ರಾಜ್ಯದಲ್ಲಿ 33 ಸಾವಿರ ಕೋಟಿ ರೂ ಹಾನಿಯಾಗಿದ್ದು, ನಾವು ಕೇಂದ್ರದಿಂದ 13,910 ಕೋಟಿ ರೂ ಬರ ಪರಿಹಾರ ನೀಡಲು ಕೇಳಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದುವರೆಗೆ ಒಂದು ನಯಾಪೈಸೆ ನೀಡದೆ, ನಮ್ಮ ರಾಜ್ಯದ ಮೇಲೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: 'ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ': ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ